ಡೈಲಿ ವಾರ್ತೆ: 06/ಜುಲೈ/2025

ಮೊಹರಂ ಆಚರಣೆ ವೇಳೆ ದುರಂತ: ಅಲಾಯಿ ಕುಣಿ ಬೆಂಕಿಗೆ ಬಿದ್ದು ವ್ಯಕ್ತಿ ಗಂಭೀರ ಗಾಯ!

ರಾಯಚೂರು: ಭಾವೈಕ್ಯತೆ ಪ್ರತೀಕವಾದ ಮೊಹರಂ ಹಬ್ಬವನ್ನು ನಾಡಿನಾದ್ಯಂತ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತಿದೆ. ಹಬ್ಬದ ವೇಳೆ ಆಕಸ್ಮಿಕವಾಗಿ ಅಲಾಯಿ ಕುಣಿ ಬೆಂಕಿಗೆ ಬಿದ್ದು ವ್ಯಕ್ತಿಯೋರ್ವ ಗಂಭೀರವಾಗಿ ಗಾಯಗೊಂಡ ಘಟನೆ ಜಿಲ್ಲೆಯ ಲಿಂಗಸುಗೂರು ತಾಲೂಕಿನ ಯರಗುಂಟಿ ಗ್ರಾಮದಲ್ಲಿ ನಡೆದಿದೆ.

ಹನುಮಂತ ಪೊಲೀಸ್ ಪಾಟೀಲ್ (45) ಗಂಭೀರ ಗಾಯಗೊಂಡ ವ್ಯಕ್ತಿ ಎಂದು ತಿಳಿದು ಬಂದಿದೆ.

ಮೊಹರಂ ಹಬ್ಬದ ಕಫಲ್ ರಾತ್ರಿ ಆಚರಣೆಗೆ ಗ್ರಾಮದ ಹಸನ್​ ಹುಸೇನ್ ಆಲಂಗಳ ದರ್ಗಾದ ಮುಂದೆ ಅಲಾಯಿ ಕುಣಿಯಲ್ಲಿ ಕೆಂಡ ಹಾಯಲು ಕಟ್ಟಿಗೆಗಳನ್ನು ಹಾಕಿ ಬೆಂಕಿ ಹಚ್ಚಲಾಗಿತ್ತು. ಈ ವೇಳೆ ಹನುಮಂತು ಬೆಂಕಿಗೆ ಬಿದ್ದಿದ್ದಾನೆ.
ತಕ್ಷಣ ಸ್ಥಳದಲ್ಲಿದ್ದವರು ಆತನ ನೆರವಿಗೆ ಧಾವಿಸಿ, ರಕ್ಷಿಸಲು ಹರಸಾಹಸ ಪಟ್ಟಿದ್ದಾರೆ. ಅಷ್ಟರಲ್ಲಿ ದೇಹ ಬೆಂಕಿಯಿಂದ ಸುಟ್ಟು ಹೋಗಿದೆ.

ಅಲಾಯಿ ಕುಣಿಯಿಂದ ಮೇಲೆತ್ತುವುದರೊಳಗೆ ಗಂಭೀರವಾಗಿ ಗಾಯಗೊಂಡಿದ್ದ ಹನುಮಂತನಿಗೆ ಲಿಂಗಸುಗೂರು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಬೆಂಕಿ ಕೆನ್ನಾಲಿಗೆಯಲ್ಲಿ ದೇಹ ಸುಟ್ಟಿರುವುದರಿಂದ ತೀವ್ರವಾಗಿ ಗಾಯಗೊಂಡಿರುವ ಹನುಮಂತ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ. ಲಿಂಗಸುಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.