ಡೈಲಿ ವಾರ್ತೆ: 15/ಜುಲೈ/2025

ಧರ್ಮಸ್ಥಳದಲ್ಲಿ 22 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಮಗಳನ್ನು ಹುಡುಕಿ ಕೊಡಿ – ಎಸ್ಪಿಗೆ ದೂರು ನೀಡಿದ ತಾಯಿ

ಮಂಗಳೂರು: ಧರ್ಮಸ್ಥಳದಲ್ಲಿ 2003ರಲ್ಲಿ ಎಂಬಿಬಿಎಸ್ ವಿದ್ಯಾರ್ಥಿನಿ ಅನನ್ಯಾ ಭಟ್ ನಾಪತ್ತೆಯಾದ ಬಗ್ಗೆ ಎರಡು ದಶಕಗಳ ಬಳಿ ಆಕೆಯ ತಾಯಿ ಸುಜಾತಾ ಭಟ್ ಎಸ್‌ಪಿ ಕಚೇರಿಗೆ ದೂರು ನೀಡಿದ್ದಾರೆ.

ತಮ್ಮ ವಕೀಲರೊಂದಿಗೆ ಎಸ್‌ಪಿ ಕಚೇರಿಗೆ ಆಗಮಿಸಿದ ಅವರು, ಎಸ್ಪಿಯರನ್ನು ಭೇಟಿ ಮಾಡಿ ದೂರು ನೀಡಿದ್ದಾರೆ. ಈ ವೇಳೆ ಎಸ್‌ಪಿ ಈ ಬಗ್ಗೆ ಧರ್ಮಸ್ಥಳ ಠಾಣೆಗೆ ಭೇಟಿ ಮಾಡಿ ದೂರು ನೀಡುವಂತೆ ಸೂಚಿಸಿದ್ದಾರೆ ಎಂದು ದೂರುದಾರೆ ಸುಜಾತ ಭಟ್‌ ಹೇಳಿದ್ದಾರೆ.

ಅನನ್ಯಾ ಭಟ್ ಕಣ್ಮರೆಯಾಗಿ 2 ದಶಕಗಳ ಬಳಿಕ ತಾಯಿ ಸುಜಾತಾ ಭಟ್ ದೂರು ನೀಡಲು ಮುಂದಾಗಿದ್ದಾರೆ. ಮಣಿಪಾಲ ಕಸ್ತೂ‌ರ್ ಬಾ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಮಾಡುತ್ತಿದ್ದ ವಿದ್ಯಾರ್ಥಿನಿ ಅನನ್ಯಾ ಭಟ್ ತಮ್ಮ ಇಬ್ಬರು ಗೆಳತಿಯರೊಂದಿಗೆ ಧರ್ಮಸ್ಥಳಕ್ಕೆ ಬಂದಿದ್ದರು. ಈ ವೇಳೆ ಸ್ನೇಹಿತೆಯರು ತಮ್ಮ ಬಟ್ಟೆಬರೆ ತರಲು ಹೋಗಿ ಮರಳಿ ಬಂದಾಗ ಅನನ್ಯಾ ಭಟ್ ನಾಪತ್ತೆಯಾಗಿದ್ದರು. ಅಂದು ಧರ್ಮಸ್ಥಳ ಠಾಣೆಗೆ ದೂರು ದಾಖಲಿಸಲು ಹೋದಾಗ ದೂರು ಸ್ವೀಕರಿಸಿಲ್ಲ ಎಂದು ಸುಜಾತ ಭಟ್ ಹೇಳಿದ್ದಾರೆ.

ಮೊನ್ನೆ ವ್ಯಕ್ತಿಯೊಬ್ಬರು ನ್ಯಾಯಾಲಯದ ಮುಂದೆ ಹಾಜರಾಗಿ ಅನೇಕ ಮೃತದೇಹವನ್ನು ಹೂತಿದ್ದೇನೆ ಎಂದು ಹೇಳಿದ ಬಳಿಕ ನನ್ನ ಪುತ್ರಿಯ ನಾಪತ್ತೆ ಬಗ್ಗೆ ದೂರು ದಾಖಲಿಸಲು ನಿರ್ಧರಿಸಿದ್ದೇನೆ. ಆಕೆಯ ಮೃತದೇಹ ಪತ್ತೆಯಾಗಿ ಡಿಎನ್‌ಎ ಮ್ಯಾಚ್ ಆದಲ್ಲಿ, ನಮ್ಮ ಬ್ರಾಹ್ಮಣ ಪದ್ಧತಿಯಂತೆ ಅಂತ್ಯಸಂಸ್ಕಾರ ನಡೆಸುವ ಆಸೆಯಿದೆ ಎಂದು ಸುಜಾತ ಭಟ್ ಕಣ್ಣೀರು ಹರಿಸಿದರು.

ವಕೀಲ ಮಂಜುನಾಥ ಭಟ್ ಮಾತನಾಡಿ, ಎಸ್‌ಪಿಯನ್ನು ಇವತ್ತು ಭೇಟಿ ಮಾಡಿದ್ದೇವೆ. ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ದೂರು ದಾಖಲಿಸಿ ಈ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ ಎಂದು ಹೇಳಿದರು.