ಡೈಲಿ ವಾರ್ತೆ: 15/ಜುಲೈ/2025

ಮೂಡುಬಿದ್ರೆ| ಇಬ್ಬರು ಉಪನ್ಯಾಸಕರು ಹಾಗೂ ಸ್ನೇಹಿತ ಸೇರಿ ಮೂವರಿಂದ ವಿದ್ಯಾರ್ಥಿನಿಯ ಅತ್ಯಾಚಾರ:
ಮೂವರು ಆರೋಪಿಗಳ ಬಂಧನ

ಮೂಡುಬಿದ್ರೆ: ಮೂಡುಬಿದ್ರೆಯ ಖಾಸಗಿ
ಕಾಲೇಜೊಂದರ ಇಬ್ಬರು ಉಪನ್ಯಾಸಕರು ಹಾಗೂ ಅವರ ಸ್ನೇಹಿತನೊಬ್ಬ ಬೆಂಗಳೂರಿನ ಇಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬಳನ್ನು ಹಳೆಯ ಪರಿಚಯದಲ್ಲಿ ಸಲುಗೆ ಬೆಳೆಸಿ ಅತ್ಯಾಚಾರ ಎಸಗಿದ ಆರೋಪ ಸಂಬಂಧ ಬೆಂಗಳೂರಿನ ಮಾರತಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಮೂಡುಬಿದ್ರೆ ಖಾಸಗಿ ಕಾಲೇಜಿನ ಭೌತಶಾಸ್ತ್ರ ಉಪನ್ಯಾಸಕ ನರೇಂದ್ರ, ಜೀವಶಾಸ್ತ್ರ ಉಪನ್ಯಾಸಕ ಸಂದೀಪ್ ಹಾಗೂ ಅವರ ಗೆಳೆಯ ಅನೂಪ್ ಎಂದು ಗುರುತಿಸಲಾಗಿದೆ.

ಭೌತಶಾಸ್ತ್ರ ಉಪನ್ಯಾಸಕ ನರೇಂದ್ರ ನೋಟ್ಸ್ ನೀಡುವ ನೆಪದಲ್ಲಿ ಎರಡು ವರ್ಷದ ಹಿಂದೆ ವಿದ್ಯಾರ್ಥಿನಿ ಜೊತೆ ಸಲುಗೆ ಬೆಳೆಸಿದ್ದು ಬಳಿಕ ವಾಟ್ಸಾಪ್ ನಲ್ಲಿ ಚಾಟ್ ಮಾಡುತ್ತಿದ್ದ. ಬೆಂಗಳೂರು ಮೂಲದ ಯುವತಿಯಾಗಿದ್ದು ಆಕೆಯ ಜೊತೆಗೆ ಚಾಟ್ ಮಾಡುವುದು, ಅದರ ನೆಪದಲ್ಲಿ ಸಲುಗೆಯ ಸಂಬಂಧ ಮುಂದುವರಿಸಿದ್ದ. ಅದೇ ನೆಪದಲ್ಲಿ ಮಾರತಹಳ್ಳಿಯ ಗೆಳೆಯನ ರೂಮ್‌ಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದು ಯಾರಿಗೂ ವಿಷಯ ತಿಳಿಸದಂತೆ ಬೆದರಿಕೆ ಹಾಕಿದ್ದ.

ಉಪನ್ಯಾಸಕ ನರೇಂದ್ರ ದುಷ್ಕೃತ್ಯ ಎಸಗಿದ ಬಳಿಕ ಆತನ ಸ್ನೇಹಿತ ಅದೇ ಕಾಲೇಜಿನ ಬಯಾಲಜಿ ವಿಭಾಗದ ಉಪನ್ಯಾಸಕ ಸಂದೀಪ್ ಕೂಡ ಯುವತಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ. ಆಕೆ ವಿರೋಧ ವ್ಯಕ್ತಪಡಿಸಿದಾಗ, ನೀನು ನರೇಂದ್ರನ ಜೊತೆಗಿರುವ ಫೋಟೊ ಹಾಗೂ ವಿಡಿಯೋ ನನ್ನ ಬಳಿ ಇದೆ. ಅದನ್ನು ಕಾಲೇಜಿನಲ್ಲಿ ಇತರ ವಿದ್ಯಾರ್ಥಿಗಳಿಗೆ ಷೇರ್ ಮಾಡುತ್ತೇನೆ ಎಂದು ಹೇಳಿ ಬ್ಲಾಕ್ ಮೇಲ್ ಮಾಡಿ ಅತ್ಯಾಚಾರ ನಡೆಸಿದ್ದ.

ಸಂದೀಪ್‌ ಅತ್ಯಾಚಾರ ಕೃತ್ಯಕ್ಕೆ ಅನೂಪ್ ಎಂಬಾತನ ರೂಮ್ ಬಳಸಿದ್ದ. ಇದರ ಬೆನ್ನಲ್ಲೇ ವಿದ್ಯಾರ್ಥಿನಿಯನ್ನು ಸಂಪರ್ಕಿಸಿದ್ದ ಅನೂಪ್, ನೀನು ನನ್ನ ರೂಮ್‌ಗೆ ಬಂದಿರುವುದು ಕೊಠಡಿಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ನನ್ನ ರೂಮ್‌ನಲ್ಲಿ ಸಿಸಿಟಿವಿ ಇದೆ ಎಂದು ಹೇಳಿ ತನಗೂ ಒಂದು ಅವಕಾಶ ಕೊಡುವಂತೆ ಬ್ಲಾಕ್ಮೇಲ್ ಮಾಡಿದ್ದ.

ಉಪನ್ಯಾಸಕರಿಬ್ಬರು ಮತ್ತು ಅವರ ಸ್ನೇಹಿತ ನಿರಂತರ ಬ್ಲಾಕ್ಮೇಲ್ ಮಾಡಿದ್ದರಿಂದ ಹೆದರಿದ ಯುವತಿ, ತನ್ನ ಪೋಷಕರಿಗೆ ತಿಳಿಸಿದ್ದಳು. ಯುವತಿ ಎರಡು ವರ್ಷಗಳ ಹಿಂದೆ ಮೂಡುಬಿದ್ರೆ ಖಾಸಗಿ ಕಾಲೇಜಿನಲ್ಲಿ ಪಿಯುಸಿ ಮುಗಿಸಿದ್ದು ಆನಂತರ ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ಕಾಲೇಜು ಸೇರಿದ್ದಳು. ಆದರೆ ಪಿಯುಸಿಯಲ್ಲಿ ಕಲಿಸಿದ್ದ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಮೂಲದ ಇಬ್ಬರು ಉಪನ್ಯಾಸಕರು ವಿದ್ಯಾರ್ಥಿನಿ ಜೊತೆಗೆ ಚಾಟಿಂಗ್ ಮುಂದುವರಿಸಿದ್ದು ಸಲುಗೆ ಬೆಳೆಸಿ ದುರುಪಯೋಗ ಮಾಡಿದ್ದಾರೆ.

ಪೋಷಕರು ವಿಷಯ ತಿಳಿಯುತ್ತಲೇ ಮಗಳನ್ನು ಮಹಿಳಾ ಆಯೋಗಕ್ಕೆ ಕರೆದೊಯ್ದ ಅಲ್ಲಿ ದೂರು ದಾಖಲಿಸಿದ್ದಲ್ಲದೆ, ಕೌನ್ಸೆಲಿಂಗ್ ನೀಡಿದ್ದಾರೆ. ಬಳಿಕ ಪೊಲೀಸರಿಗೂ ದೂರು ಕೊಟ್ಟಿದ್ದಾರೆ. ಪೊಲೀಸರು ಮೂವರು ಆರೋಪಿಗಳನ್ನೂ ಬಂಧಿಸಿದ್ದಾರೆ.