


ಡೈಲಿ ವಾರ್ತೆ: 15/ಜುಲೈ/2025


ಕುಂದಾಪುರ| ಕರಾವಳಿಯಲ್ಲಿ ಕೋಮು ಸೌಹಾರ್ದತೆ ಶಾಂತಿ ಕಾಪಾಡಲು
“ಬೋರ್ಗರೆಯುವ ಮಳೆ” ಯಲ್ಲಿ ಸೌಹಾರ್ದ ಸಂಚಾರಕ್ಕೆ ಚಾಲನೆ


ಕುಂದಾಪುರ: ನಾನು ಭಾರತೀಯ ಎನ್ನುವ ಧ್ಯೇಯ ವಾಕ್ಯಗಳನ್ನು ಭಾರತದಲ್ಲಿ ಹುಟ್ಟಿದ ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕು. ಎಲ್ಲಾ ಧರ್ಮಗಳೂ ಒಂದೇ ಎನ್ನುವ ಸೌಹಾರ್ದತೆಯನ್ನು ಸಾರುವ ನಿಟ್ಟಿನಲ್ಲಿ ಕರಾವಳಿ ಕರ್ನಾಟಕದಲ್ಲಿ ಎಸ್.ವೈ ಎಸ್. ಸಂಘಟನೆಯೊಂದಿಗೆ ಕೈಜೋಡಿಸಬೇಕಾಗಿದೆ. ನಾವೆಲ್ಲರೂ ಜಾತಿ, ಮತ, ಪಂಥಗಳ ಅಂತರಗಳನ್ನು ತೊರೆದು ಸೌಹಾರ್ದತೆಯೊಂದಿಗೆ ಸಾಗೋಣ ಎಂದು ಬೈಂದೂರು ಹಲಗೇರಿ ಜೋಗಿ ಮನೆಯ ಶ್ರೀ ವಸಂತನಾಥ ಗುರೂಜಿ ಕರೆನೀಡಿದರು. ಅವರು ಸೋಮವಾರ ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘವು ಕರಾವಳಿ ಕರ್ನಾಟಕದಲ್ಲಿ ಕೋಮು ಸೌಹಾರ್ದವನ್ನು ಬಲಪಡಿಸುವ ಉದ್ದೇಶದಿಂದ ಹೃದಯ ಹೃದಯಗಳನ್ನು ಬೆಸೆಯೋಣ ಎಂಬ ಧೈಯವಾಕ್ಯದೊಂದಿಗೆ ಕುಂದಾಪುರದಲ್ಲಿ ಆರಂಭಗೊಂಡ ‘ಸೌಹಾರ್ದ ಸಂಚಾರ’ವನ್ನು ಉದ್ಘಾಟಿಸಿ ಮಾತನಾಡಿದರು.


ಪವಿತ್ರ ಕುರಾನ್ ಹಿಂಸೆಯನ್ನು ಆರಾಧಿಸುವುದಿಲ್ಲ. ಪೈಗಂಬರ್ ಜೀವನ ಚರಿತ್ರೆಯನ್ನು ಸರಿಯಾಗಿ ಅಧ್ಯಯನ ಮಾಡಿದ ಯಾವ ವ್ಯಕ್ತಿಯೂ ಧರ್ಮದ್ವೇಷ ಮಾಡಲು ಸಾಧ್ಯವಿಲ್ಲ. ಜಗತ್ತಿನ ಯಾವ ಧರ್ಮವೂ ಇನ್ನೊಂದು ಧರ್ಮವನ್ನು ಪ್ರೀತಿಸು ಎನ್ನುತ್ತದೆಯೇ ಹೊರತು ದ್ವೇಷಿಸಲು ಉಪದೇಶಿಸುವುದಿಲ್ಲ. ಎಲ್ಲಾ ಧರ್ಮದ ಸಾರ ಶಾಂತಿ ಸಾರುವುದೇ ಆಗಿದೆ ಎಂದು ಕರ್ನಾಟಕ ವಕ್ಫ್ ಕೌನ್ಸಿಲ್ ಉಪಾಧ್ಯಕ್ಷ ಮೌಲಾನಾ ಶಾಫಿ ಸಅದಿ ಹೇಳಿದರು.

ಧರ್ಮಗುರು ರೆ.ಫಾ. ನೋವೆಲ್ ಬ್ರಹ್ಮಾವರ ಮಾತನಾಡಿ, ಕ್ರೈಸ್ತ ಮೆಷಿನರಿಗಳು ಕರಾವಳಿಯಲ್ಲಿ ಇಂದಿಗೂ ಯಾವುದೇ ಧರ್ಮ ಬೇದ ಮಾಡದೇ ಸಾಮಾಜಿಕ ಸೇವೆ ನೀಡುತ್ತಿದ್ದೆ. ಫಾದರ್ ಮುಲ್ಲರ್ ಆಸ್ಪತ್ರೆ, ಬಾಸೆಲ್ ಮಿಷನ್ ಹೆಂಚಿನ ಕಾರ್ಖಾನೆಗಳು, ಶಿಕ್ಷಣ ಸಂಸ್ಥೆಗಳು ಇಮದಿಗೂ ಕೊಡುಗೆಯಾಗಿ ಉಳಿದಿಲ್ಲ, ಅವು ಸಹೋದರತೆ, ನಂಬಿಕೆ, ವಿಶ್ವಾಸಗಳನ್ನು ಗಟ್ಟಿಗೊಳಿಸುವಲ್ಲಿ ತಮ್ಮದೇ ಕೊಡುಗೆ ನೀಡುತ್ತಿವೆ. ರಾವ ರಾಜಕೀಯ ಪಕ್ಷಗಳು, ನಾಯಕರು ನಮ್ಮನ್ನು ಒಂದುಗೂಡಿಸಬೇಕಿತ್ತೋ ಅವೇ ನಮ್ಮನ್ನು ವಿಭಜಿಸಲು ಹುನ್ನಾರ ನಡೆಸುತ್ತಿರುವುದನ್ನು ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕಿದೆ ಎಂದರು.

ಕಾರ್ಯಕ್ರಮಕ್ಕೆ ಮುನ್ನ ಕುಂದಾಪುರದ ಮುಖ್ಯ ಪೇಟೆಯಲ್ಲಿ ಶಾಂತಿ ಮೆರವಣಿಗೆ ನಡೆಯಿತು. ಸೈಯದ್ ಕೋಟೇಶ್ವರ ತಂಙಳ್ ಝಿಯಾರತ್ ಮೂಲಕ ಚಾಲನೆ ನೀಡಿದರು. ಪತ್ರಕರ್ತ ಶಶಿಧರ ಹೆಮ್ಮಾಡಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘದ ಅಧ್ಯಕ್ಷ ಬಶೀರ್ ಸಅದಿ ಬೆಂಗಳೂರು ಅಧ್ಯಕ್ಷತೆ ವಹಿಸಿದ್ದರು.


ಉಳ್ಳಾಲ ದರ್ಗಾ ಸಮಿತಿ ಅಧ್ಯಕ್ಷ ಹನೀಫ್ ಹಾಜಿ, ಸಹಬಾಳ್ವೆ ಕುಂದಾಪುರ ಇದರ ರಾಮಕೃಷ್ಣ ಹೇರ್ಳೆ, ಸಿಪಿಐಎಂ ಪಕ್ಷದ ಮುಖಂಡರಾದ ಚಂದ್ರಶೇಖರ ದೇವಾಡಿಗ, ಮಹಾಬಲ, ಕುಂದಾಪುರ ಕ್ಯಾಥೋಲಿಕ್ ಸಭಾ ಅಧ್ಯಕ್ಷ ವಿಲ್ಸನ್ ಡಿ ಅಲ್ಮೇಡಾ, ಜಿಲ್ಲಾ ಕಂಗ್ರೆಸ್ ವಕ್ತಾರ ವಿಕಾಸ್ ಹೆಗ್ಡೆ, ಕಾಂಗ್ರೆಸ್ ಜಿಲ್ಲಾ ಐಟಿ ಸೆಲ್ ಅಧ್ಯಕ್ಷ ರೋಷನ್ ಶೆಟ್ಟಿ, ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.
ಎಸ್.ವೈ.ಎಸ್. ರಾಜ್ಯ ಸಮಿತಿಯ ಸದಸ್ಯ ಕೆ.ಎಮ್.ಇಲ್ಯಾಸ್ ಸ್ವಾಗತಿಸಿದರು. ಎಸ್.ವೈ.ಎಸ್. ಸಮಿತಿಯ ರಾಜ್ಯಾಧ್ಯಕ್ಷ ಭಶಿರ್ ಸಾಧಿ ಬೆಂಗಳೂರು ಪ್ರಾಸ್ತಾವಿಕ ಮಾತನಾಡಿದರು. ಸ್ವಾಗತ ಸಮಿತಿಯ ಗೌರವಾಧ್ಯಕ್ಷ್ ಅಬು ಅಹಮ್ಮದ್ ವಂದಿಸಿದರು.