


ಡೈಲಿ ವಾರ್ತೆ: 16/ಜುಲೈ/2025


ಬೆಂಕಿ ಹಚ್ಚಿಕೊಂಡು ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣ: ಒಡಿಶಾ ವಿಧಾನಸೌಧ ಬಳಿ ಭುಗಿಲೆದ್ದ ಆಕ್ರೋಶ

ಭುವನೇಶ್ವರ: ಲೈಂಗಿಕ ಕಿರುಕುಳದಿಂದ ಬೇಸತ್ತು ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಖಂಡಿಸಿ ಒಡಿಶಾದಲ್ಲಿ ಪ್ರತಿಭಟನೆಗಳು ಭುಗಿಲೆದ್ದಿವೆ.
ವಿದ್ಯಾರ್ಥಿನಿ ತನ್ನ ಕಾಲೇಜಿನ ವಿಭಾಗದ ಮುಖ್ಯಸ್ಥರ ಮೇಲೆ ಲೈಂಗಿಕ ಕಿರುಕುಳದ ಆರೋಪ ಹೊರಿಸಿದ್ದಳು. ಈ ಬಗ್ಗೆ ದೂರು ಕೂಡ ನೀಡಿದ್ದರು. ಯಾವುದೇ ಕ್ರಮ ಜರುಗಿಸದ ಬಗ್ಗೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಳು.
ಪ್ರಕರಣ ಖಂಡಿಸಿ ಒಡಿಶಾದ ವಿಧಾನಸೌಧದ ಎದುರು ಭಾರಿ ಪ್ರತಿಭಟನೆ ನಡೆಸಲಾಗುತ್ತಿದೆ. ಬಿಜು ಜನತಾದಳ (ಬಿಜೆಡಿ) ಕಾರ್ಯಕರ್ತರು ಪ್ರತಿಭಟನೆಯ ನೇತೃತ್ವ ವಹಿಸಿದ್ದು, ಬೆಳಗ್ಗೆ 6 ರಿಂದ ಮಧ್ಯಾಹ್ನ 2 ರವರೆಗೆ ‘ಬಾಲಸೋರ್ ಬಂದ್’ಗೆ ಕರೆ ನೀಡಿದ್ದಾರೆ.
ಪ್ರತಿಭಟನಾಕಾರರು ರಸ್ತೆಗಳಲ್ಲಿ ಟೈರ್‌ಗಳನ್ನು ಸುಟ್ಟು, ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಮತ್ತು ಶಿಕ್ಷಣ ಸಚಿವ ಸೂರ್ಯಬಂಶಿ ಸೂರಜ್ ಅವರ ರಾಜೀನಾಮೆಗೆ ಒತ್ತಾಯಿಸಿದ್ದಾರೆ. ಪ್ರಕರಣದಲ್ಲಿ ಅವರು ನಿಷ್ಕ್ರಿಯರಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ನಮ್ಮ ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುತ್ತಿದ್ದಾರೆ. ಸಂತ್ರಸ್ತೆಗೆ ನ್ಯಾಯ ಸಿಗಬೇಕು. ಮುಖ್ಯಮಂತ್ರಿ ಮತ್ತು ರಾಜ್ಯ ಆರೋಗ್ಯ ಸಚಿವರು ರಾಜೀನಾಮೆ ನೀಡಬೇಕು. ನಾವು ಬೆಳಗ್ಗೆ 6 ರಿಂದ ಮಧ್ಯಾಹ್ನ 2 ರವರೆಗೆ ಬಾಲಸೋರ್ ಬಂದ್‌ಗೆ ಕರೆ ನೀಡಿದ್ದೇವೆ ಎಂದು ಬಿಜೆಡಿ ಕಾರ್ಯಕರ್ತರೊಬ್ಬರು ಒತ್ತಾಯಿಸಿದ್ದಾರೆ.
ಒಡಿಶಾದ ಬಾಲೇಶ್ವರ ಜಿಲ್ಲೆಯ ಫಕೀರ್ ಮೋಹನ್ ಕಾಲೇಜಿನಲ್ಲಿ ಬಿ.ಎಡ್ ವಿದ್ಯಾರ್ಥಿನಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದರು. ನನಗೆ ಪ್ರಾಧ್ಯಾಪಕರು ಲೈಂಗಿಕ ಕಿರುಕುಳ ನೀಡುತ್ತಿದ್ದಾರೆಂದು ಪ್ರಾಂಶುಪಾಲರಿಗೆ ದೂರು ನೀಡಿದ್ದರು. ಆದರೆ, ಆಕೆಯ ದೂರನ್ನು ಪರಿಗಣಿಸದ ಕಾರಣ ಬೇಸತ್ತು ಕಾಲೇಜು ಹೊರಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ವಿದ್ಯಾರ್ಥಿನಿ ಮೃತಪಟ್ಟಿದ್ದಾರೆ.