ಡೈಲಿ ವಾರ್ತೆ: 16/ಜುಲೈ/2025

ಕಾಡಾನೆ ದಾಳಿ – ಮನೆ ಮೇಲೆ ತೆಂಗಿನ ಮರ ಬಿದ್ದು ಲಕ್ಷಾಂತರ ರೂ. ನಷ್ಟ

ಮಡಿಕೇರಿ: ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಕಕ್ಕಬೆ ಕುಂಜಿಲ ಗ್ರಾಮ ಪಂಚಾಯಿತಿಯ ಯವಕಪಾಡಿ ಗ್ರಾಮದ ಕುಡಿಯರ ಕಾಲೋನಿಯಲ್ಲಿ ಕಳೆದ ರಾತ್ರಿ ಕಾಡಾನೆ ದಾಂಧಲೆ ನಡೆಸಿದೆ. ಈ ವೇಳೆ ತೆಂಗಿನ ಮರವೊಂದು ಗ್ರಾಮದ ನಿವಾಸಿ ಕುಡಿಯರ ಗಣೇಶ್ ಅವರ ಮನೆಯ ಮೇಲೆ ಬಿದ್ದು ಭಾರೀ ನಷ್ಟ ಸಂಭವಿಸಿದೆ.

ಅಲ್ಲದೇ ಮನೆಯ ಸುತ್ತಮುತ್ತ ಆಡ್ಡಾಡಿ ಕೃಷಿ ಬೆಳೆಯನ್ನು ತಿಂದು ನಷ್ಟ ಉಂಟುಮಾಡಿದೆ. ಕುಟುಂಬದ ಮಂದಿ ಕಾರ್ಯನಿಮಿತ್ತ ಬೇರೆಡೆ ತೆರಳಿದ್ದರಿಂದ ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ.

ಈ ಕುರಿತು ಮಡಿಕೇರಿ ತಾಲೂಕು ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷ ಕುಡಿಯರ ಮುತ್ತಪ್ಪ ಮಾತನಾಡಿ, ಕಳೆದ ಎರಡು ವರ್ಷಗಳಲ್ಲಿ ಕಾಡಾನೆ ದಾಳಿಯಿಂದಲೇ ಈ ಭಾಗದಲ್ಲಿ ವಾಸಿಸುವ ಸಾಕಷ್ಟು ಮನೆಗಳು ಹಾನಿಗೀಡಾಗಿವೆ. ಲಕ್ಷಾಂತರ ರುಪಾಯಿ ನಷ್ಟ ಸಂಭವಿಸಿದೆ ಎಂದು ಬೇಸರ ಹೊರಹಾಕಿದ್ದಾರೆ.
ಯವಕಪಾಡಿ, ಮರಂದೋಡ, ಕುಂಜಿಲ ಸೇರಿದಂತೆ ವಿವಿಧ ಗ್ರಾಮಗಳಲ್ಲಿನ ತೋಟಗಳು ಹಾನಿಯಾಗಿವೆ. ಇಲ್ಲಿ ಒಂಟಿ ಸಲಗ ಒಂದು ಅಡ್ಡಾಡುತ್ತಿದ್ದು ಪ್ರತಿವರ್ಷ ಸಮಸ್ಯೆ ಆಗುತ್ತಿದೆ. ಒಂಟಿ ಸಲಗವನ್ನ ಹಿಡಿಯಲು ಕೇಂದ್ರ ಸರ್ಕಾರದಿಂದ ಆದೇಶವಾಗಿದ್ದರೂ ಅರಣ್ಯ ಇಲಾಖೆ ಆನೆ ಸೆರೆಹಿಡಿಯಲು ವಿಫಲವಾಗಿದೆ. ಆನೆ ದಾಳಿಯಿಂದ ಹಾನಿಗೊಳಗಾದ ಮನೆಯನ್ನ ಪುನಃ ನಿರ್ಮಿಸಲು ಕುಟುಂಬಕ್ಕೆ ಆರ್ಥಿಕ ನೆರವು ನೀಡುವ ಅಗತ್ಯವಿದೆ. 10 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ.