


ಡೈಲಿ ವಾರ್ತೆ: 22/ಜುಲೈ/2025


ಕರ್ನಾಟಕದಲ್ಲಿ VIP ಸಂಚಾರ ವೇಳೆ ಸೈರನ್ ಬಳಕೆ ನಿಷೇಧ: ಪೊಲೀಸ್ ಮಹಾನಿರ್ದೇಶಕ ಮಹತ್ವದ ಆದೇಶ

ಬೆಂಗಳೂರು: ಬೆಂಗಳೂರು ಸಹಿತ ರಾಜ್ಯದಲ್ಲಿ ಗಣ್ಯ
ವ್ಯಕ್ತಿಗಳ (ವಿಐಪಿ) ಸಂಚಾರದ ವೇಳೆ ಸೈರನ್ ಬಳಕೆ ನಿಷೇಧಿಸಿ ರಾಜ್ಯ ಪೊಲೀಸ್ ಮಹಾ ನಿರ್ದೇಶಕ(ಡಿಜಿ-ಐಜಿಪಿ) ಡಾ| ಎಂ.ಎ.ಸಲೀಂ ಸೋಮವಾರ ಆದೇಶ ಹೊರಡಿಸಿದ್ದಾರೆ.
ಸಾರ್ವಜನಿಕರ ಸುರಕ್ಷೆ ಹಾಗೂ ಶಬ್ದ ಮಾಲಿನ್ಯ ನಿಯಂತ್ರಣ ದೃಷ್ಟಿಯಿಂದ ವಿಐಪಿ ಸಂಚಾರದ ಸಂದರ್ಭದಲ್ಲಿ ವಾಹನಗಳ ಸೈರನ್ ನಿಷೇಧಿಸಲಾಗಿದೆ.
ಅನವಶ್ಯಕವಾಗಿ ಸೈರನ್ ಮೊಳಗಿಸುವುದರಿಂದ ಗಣ್ಯರು ಯಾವ ರಸ್ತೆಯಲ್ಲಿ ಚಲಿಸುತ್ತಿದ್ದಾರೆ ಎಂಬ ಬಗ್ಗೆ ಅನಧಿಕೃತ ವ್ಯಕ್ತಿಗಳಿಗೆ ಮಾಹಿತಿ ರವಾನೆಯಾಗಿ ಗಣ್ಯರಿಗೆ ಅಪಾಯ ಉಂಟಾಗುವ ಸಾಧ್ಯತೆಯೂ ಇದೆ ಎಂದು ಆದೇಶದಲ್ಲಿ ಉಲ್ಲೇಖೀಸಲಾಗಿದೆ.
ಅಪಘಾತ ಉಂಟಾಗುವ ಸಾಧ್ಯತೆ:
ಸಾರ್ವಜನಿಕ ರಸ್ತೆಗಳ ಮೇಲೆ ಏಕಾಏಕಿ ಸೈರನ್ ಬಳಸುವುದರಿಂದ ಇತರ ವಾಹನ ಚಾಲಕರಿಗೆ ತೊಂದರೆಯಾಗುತ್ತದೆ. ಸೈರನ್ ಬಳಕೆಯಿಂದ ಗೊಂದಲ ಉಂಟಾಗಿ ವಾಹನವನ್ನು ಅಡ್ಡಾದಿಡ್ಡಿಯಾಗಿ ಚಲಾಯಿಸಿ ಬೆಂಗಾವಲು ಮತ್ತು ಇತರ ವಾಹನಗಳಿಗೆ ಅಪಘಾತ ಉಂಟಾಗುವ ಸಾಧ್ಯತೆ ಇರುತ್ತದೆ. ವಿಐಪಿ ಸಂಚಾರದ ವೇಳೆ ತುರ್ತು ಚಲನವಲನದ ಅಗತ್ಯಗಳಿಗೆ ದೂರಸಂಪರ್ಕ ಸಾಧನಗಳಾದ ವೈರ್‌ಲೆಸ್ ಕಮ್ಯುನಿಕೇಶನ್ ಮೂಲಕ ಮಾಹಿತಿ ವಿನಿಮಯ ಮಾಡಬೇಕು. ಇದು ಶಿಸ್ತಿನ ಹಾಗೂ ಸುರಕ್ಷಿತ ಮಾರ್ಗವಾಗಿದೆ.
ಆ್ಯಂಬುಲೆನ್ಸ್, ಪೊಲೀಸ್ ವಾಹನಕ್ಕಿಲ್ಲ ನಿರ್ಬಂಧ:
ಸೈರನ್‌ಗಳನ್ನು ಕೇವಲ ಆ್ಯಂಬುಲೆನ್ಸ್ ಪೊಲೀಸ್ ವಾಹನ, ಅಗ್ನಿಶಾಮಕ ವಾಹನಗಳು ತುರ್ತು ಪರಿಸ್ಥಿತಿಗಳಲ್ಲಿ ಮಾತ್ರ ಬಳಸಬೇಕು. ಈ ಆದೇಶವನ್ನು ಘಟಕಾಧಿಕಾರಿಗಳು ಸಂಪೂರ್ಣವಾಗಿ ಪಾಲಿಸುವಂತೆ ತಮ್ಮ ಅಧೀನದ ಅಧಿಕಾರಿಗಳು ಮತ್ತು ಸಿಬಂದಿ ಸೂಚಿಸಬೇಕು ಎಂದು ಸಲೀಂ ಆದೇಶದಲ್ಲಿ ಸೂಚಿಸಿದ್ದಾರೆ.