


ಡೈಲಿ ವಾರ್ತೆ: 22/ಜುಲೈ/2025


ಪ್ರಿಯಕರನ ಜತೆ ಸೇರಿ ಪತಿಯನ್ನು ಕೊಲೆ ಮಾಡಿ ಟೈಲ್ಸ್ ಅಡಿಯಲ್ಲಿ ಹೂತಿಟ್ಟಿದ್ದ ಪತ್ನಿ!

ಮುಂಬೈ: ಮಹಿಳೆಯೊಬ್ಬಳು ತನ್ನ ಪ್ರಿಯಕರನ ಜತೆ ಸೇರಿ ಗಂಡನನ್ನು ಹತ್ಯೆ ಮಾಡಿ ಮನೆಯ ಟೈಲ್ಸ್ ಅಡಿಯಲ್ಲಿ ಹೂತಿಟ್ಟಿದ್ದ ಘಟನೆ ತಡವಾಗಿ ಬೆಳಕಿಗೆ ಬೆಂದಿದೆ.
ಈ ಘಟನೆ ಮುಂಬೈನಲ್ಲಿ ನಡೆದಿದೆ. ಕೊಲೆಯ ಬಳಿಕ ಯಾರಿಗೂ ಅನುಮಾನ ಬಾರದಂತೆ, ಮನೆಯಲ್ಲಿ ಟೈಲ್ಸ್ ಅಗೆದು ತನ್ನ ಪತಿಯ ಶವವನ್ನು ಹೂತು ಹಾಕಿದ್ದಾಳೆ. ನಂತರ ಅದರ ಮೇಲೆ ಇನ್ನಷ್ಟು ಟೈಲ್ಸ್ ಹಾಕಿದ್ದಳು.
35 ವರ್ಷದ ವಿಜಯ್ ಚವಾಣ್ ತನ್ನ ಪತ್ನಿಯೊಂದಿಗೆ ಮುಂಬೈನಿಂದ 70 ಕಿ.ಮೀ ದೂರದಲ್ಲಿರುವ ನಲಸೋಪಾರದಲ್ಲಿ ವಾಸಿಸುತ್ತಿದ್ದರು. ವಿಜಯ್ ಕಳೆದ 15 ದಿನಗಳಿಂದ ಕಾಣೆಯಾಗಿದ್ದರು.
ಹಾಗಾಗಿ ಅವರ ಸಹೋದರ ಅವರನ್ನು ಹುಡುಕಲು ಮುಂಬೈಗೆ ಬಂದಿದ್ದರು. ಅಲ್ಲಿ ಅವರ ಪತ್ನಿಯೂ ಕಾಣೆಯಾಗಿರುವುದು ಕಂಡುಬಂದಿತ್ತು. ಮನೆಗೆ ತಲುಪಿದ ಬಳಿಕ ನೆಲದ ಮೇಲೆ ಬೇರೆ ಬಣ್ಣದ ಟೈಲ್ಸ್ ಕಂಡಿತ್ತು. ಅದರಿಂದ ಅವರು ಅನುಮಾನಗೊಂಡಿದ್ದರು.
ಎಲ್ಲರೂ ಸೇರಿ ಟೈಲ್ಸ್ ತೆಗೆದು ನೋಡಿದಾಗ ಅದರ ಕೆಳಗೆ ವಿಜಯ್ ಮೃತದೇಹ ಕೊಳೆತು ನಾರುತ್ತಿರುವುದನ್ನು ಕಂಡು ಎಲ್ಲರೂ ಬೆಚ್ಚಿಬಿದ್ದಿದ್ದಾರೆ. ಕೂಡಲೇ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಆರಂಭಿಕ ತನಿಖೆಯಲ್ಲಿ ವಿಜಯ್ ಅವರ 28 ವರ್ಷದ ಪತ್ನಿ ಕೋಮಲ್ ಮೇಲೆ ಶಂಕೆ ವ್ಯಕ್ತಪಡಿಸಲಾಯಿತು. ಕೋಮಲ್ ತನ್ನ ಪತಿಯನ್ನು ಕೊಂದು ತನ್ನ ಪ್ರಿಯಕರ ಮೋನು ಜೊತೆ ಪರಾರಿಯಾಗಿದ್ದಾಳೆ ಎಂಬ ಶಂಕೆ ವ್ಯಕ್ತವಾಗಿದೆ. ಕಳೆದ ಕೆಲವು ದಿನಗಳಿಂದ ಇಬ್ಬರೂ ನಾಪತ್ತೆಯಾಗಿದ್ದಾರೆ. ಇದಲ್ಲದೆ, ಇಬ್ಬರ ನಡುವಿನ ಪ್ರೇಮ ಸಂಬಂಧದ ಬಗ್ಗೆಯೂ ಚರ್ಚೆ ನಡೆಯುತ್ತಿದೆ.