ಡೈಲಿ ವಾರ್ತೆ: 23/ಜುಲೈ/2025

ಹೆಬ್ರಿ: ಹೋಟೆಲ್‌ನಲ್ಲಿ ಹಲ್ಲೆ ಪ್ರಕರಣ: ನಾಲ್ವರ ಬಂಧನ

ಹೆಬ್ರಿ: ಹೆಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಕಳ್ತೂರು ಗ್ರಾಮದ ಸಂತೆಕಟ್ಟೆಯಲ್ಲಿರುವ ಹೋಟೆಲ್‌ನಲ್ಲಿ ಜು. 20ರಂದು ನಡೆದ ಗಲಾಟೆಗೆ ಸಂಬಂಧಿಸಿದಂತೆ ಪೊಲೀಸರು ನಾಲ್ವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಬಂಧಿತರನ್ನು ಶ್ರೀಕಾಂತ್ ಕುಲಾಲ್, ಸದಾನಂದ ಪೂಜಾರಿ, ಸಂತೋಷ್ ನಾಯ್ಕ ಮತ್ತು ರಾಜ ಅಲಿಯಾಸ್ ರಾಜೇಶ್ ನಾಯಕ್‌ ಎಂದು ಗುರುತಿಸಲಾಗಿದೆ.

ಶ್ರೀಕಾಂತ್ ಕುಲಾಲ್, ಸದಾನಂದ ಪೂಜಾರಿ ಮತ್ತು ಸಂತೋಷ್ ನಾಯ್ಕ ಹಳೆಯ ರೌಡಿಶೀಟರ್ ರಾಜ ಅಲಿಯಾಸ್ ರಾಜೇಶ್ ನಾಯಕ್‌ಗೆ ನಿಂದಿಸಿ, ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಹೆಬ್ರಿ ಪೊಲೀಸ್ ಠಾಣೆಯಲ್ಲಿ ರಾಜ ನೀಡಿದ ದೂರಿನನ್ವಯ ಪ್ರಕರಣ ದಾಖಲಾಗಿದೆ. ಈ ಮಧ್ಯೆ ಸಂತೋಷ್ ನಾಯ್ಕ ರಾಜೇಶ್ ನಾಯಕ್ ವಿರುದ್ಧ ಜಾತಿ ನಿಂದನೆ ದೂರು ನೀಡಿದ ಹಿನ್ನೆಲೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಿಸಲಾಗಿದೆ.

ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀಕಾಂತ್ ಕುಲಾಲ್, ಸಂತೋಷ್ ನಾಯ್ಕ ಮತ್ತು ಸದಾನಂದ ಪೂಜಾರಿಯನ್ನು ಹಾಗೂ ದಲಿತ ದೌರ್ಜನ್ಯ ಪ್ರಕರಣ ಸಂಬಂಧ ರಾಜ ಅಲಿಯಾಸ್ ರಾಜೇಶ್‌ ನಾಯಕ್‌ನನ್ನು ಬಂಧಿಸಲಾಗಿದೆ.