


ಡೈಲಿ ವಾರ್ತೆ: 25/ಜುಲೈ/2025


ಶಿವಮೊಗ್ಗ| ವ್ಯಕ್ತಿಯೋರ್ವ
ಕಾರು ಚಲಾಯಿಸುತ್ತಿದ್ದಾಗಲೇ ಹೃದಯಾಘಾತದಿಂದ ಮೃತ್ಯು!

ಶಿವಮೊಗ್ಗ: ಕಾರು ಚಲಾಯಿಸುತ್ತಿದ್ದಾಗಲೇ ತೀವ್ರ ಹೃದಯಾಘಾತದಿಂದ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಶಿವಮೊಗ್ಗ ಜಿಲ್ಲೆಯ ಆಯನೂರು ಪಟ್ಟಣದ ಸರ್ಕಲ್ ನಲ್ಲಿ ಶುಕ್ರವಾರ ನಡೆದಿದೆ.
ರಿಪ್ಪನ್ ಪೇಟೆ ಪಟ್ಟಣದ ಹೊಸನಗರ ರಸ್ತೆಯ ನಿವಾಸಿ ಕಬೀರ್ ( 54) ಮೃತಪಟ್ಟ ದುರ್ದೈವಿಯಾಗಿದ್ದಾರೆ.
ರಿಪ್ಪನ್ ಪೇಟೆಯಿಂದ ಶಿವಮೊಗ್ಗಕ್ಕೆ ಕಾರ್ಯನಿಮಿತ್ತ ಕಾರಿನಲ್ಲಿ ತೆರಳುತಿದ್ದಾಗ ಆಯನೂರು ಸರ್ಕಲ್ ನಲ್ಲಿ ಕಾರು ಚಾಲನೆಯಲ್ಲಿದ್ದಾಗಲೇ ಏಕಾಏಕಿ ಎದೆ ನೋವು ಎಂದು ಪಕ್ಕದಲ್ಲಿದ್ದ ವ್ಯಕ್ತಿಯ ಬಳಿ ಹೇಳಿ ಕೂಡಲೇ ಮೂರ್ಚೆ ಹೋಗಿದ್ದಾರೆ.
ತತ್ ಕ್ಷಣ ಸಹಸವಾರ ಕಾರಿನ ಬ್ರೇಕ್ ಹಾಕಿ ನಿಲ್ಲಿಸಿ ಏನಾಗಿದೆ ಎಂದು ವಿಚಾರಿಸಿದ್ದಾರೆ.
ನಂತರ ಸ್ಥಳೀಯರ ನೆರವಿನಿಂದ ಆಯನೂರು ಸಮುದಾಯ ಆಸ್ಪತ್ರೆಗೆ ಕರೆತಂದು ಕೂಡಲೇ ಆಂಬುಲೆನ್ಸ್ ಮೂಲಕ ಶಿವಮೊಗ್ಗದ ನಂಜಪ್ಪ ಲೈಫ್ ಕೇರ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಅಷ್ಟರಲ್ಲಾಗಲೇ ಪ್ರಾಣ ಪಕ್ಷಿ ಹಾರಿಹೋಗಿದೆ.