


ಡೈಲಿ ವಾರ್ತೆ: 29/ಜುಲೈ/2025


ಧರ್ಮಸ್ಥಳ| ಶವ ಹೂತಿಟ್ಟ ಪ್ರಕರಣ ಪ್ರಮುಖ ಘಟ್ಟ ತಲುಪಿದ ತನಿಖೆ – 13 ಸ್ಥಳ ಗುರುತು, ಇಂದು ಮತ್ತಷ್ಟು ಜಾಗಗಳ ಗುರುತು ಸಾಧ್ಯತೆ!

ಧರ್ಮಸ್ಥಳ: ಧರ್ಮಸ್ಥಳ ಗ್ರಾಮದಲ್ಲಿ ಶವ ಹೂತಿಟ್ಟ ಪ್ರಕರಣದ ತನಿಖೆ ಪ್ರಮುಖ ಘಟ್ಟ ತಲುಪಿದೆ. ನೂರಾರು ಶವಗಳನ್ನು ಹೂತಿದ್ದೇನೆ ಎಂದಿದ್ದ ದೂರುದಾರ ಇದೀಗ 13 ಸ್ಥಳಗಳನ್ನ ಗುರುತಿಸಿದ್ದಾರೆ. ಇನ್ನುಳಿದ ಜಾಗಗಳನ್ನೂ ಇಂದು ಗುರುತಿಸಲಿದ್ದು, ಬಳಿಕ ಗುರುತಿಸಿರೋ ಜಾಗಗಳನ್ನು ಅಗೆಯಲು ಎಸ್‌ಐಟಿ (SIT) ತೀರ್ಮಾನಿಸಿದೆ.
ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳನ್ನ ಹೂತಿಟ್ಟಿದ್ದೇನೆ ಎಂದು ಅನಾಮಿಕ ವ್ಯಕ್ತಿ ದೂರು ನೀಡಿದ್ದ. ಆ ಬಳಿಕ ತನಿಖೆಗೆ ರಚನೆಯಾಗಿದ್ದ ಎಸ್‌ಐಟಿ, ದೂರುದಾರ ವ್ಯಕ್ತಿಯನ್ನ ಎರಡು ದಿನಗಳ ಕಾಲ ಸುದೀರ್ಘ ವಿಚಾರಣೆ ನಡೆಸಿತ್ತು. ವಿಚಾರಣೆ ವೇಳೆ ಎಲ್ಲೆಲ್ಲಿ ಶವಗಳನ್ನ ಹೂತಿಟ್ಟಿದ್ದೇನೆ ಎಂದು ಆತ ತಿಳಿಸಿದ್ದ. ಈ ಹಿನ್ನೆಲೆಯಲ್ಲಿ ಸೋಮವಾರ ಧರ್ಮಸ್ಥಳ ಗ್ರಾಮದ ಬೇರೆ ಬೇರೆ ಕಡೆಗಳಲ್ಲಿ ಶವ ಹೂತಿಟ್ಟ ಜಾಗಗಳನ್ನ ಗುರುತು ಮಾಡಲಾಗಿದೆ.
ಎಸ್‌ಐಟಿ ಅಧಿಕಾರಿಗಳು ಬಿಗಿ ಭದ್ರತೆಯಲ್ಲಿ ಆತನನ್ನು ಧರ್ಮಸ್ಥಳದ ನೇತ್ರಾವತಿ ಸ್ಥಾನಘಟ್ಟದ ಬಳಿ ಕರೆ ತಂದು, ಸ್ನಾನಘಟ್ಟದ ಎಡ ಬದಿಯಲ್ಲಿ ಎರಡು ಗಂಟೆಗಳ ಕಾಲ ಒಂದು ಕಿಲೋಮೀಟರ್ ಸಾಗಿ ಒಟ್ಟು 8 ಸ್ಥಳಗಳನ್ನ ಗುರುತಿಸಲಾಗಿತ್ತು. ಬಳಿಕ ನೇತ್ರಾವತಿ ಸ್ನಾನಘಟ್ಟ ಹಾಗೂ ನೇತ್ರಾವತಿ ಸೇತುವೆಯ ಮಧ್ಯಭಾಗದ ಅರಣ್ಯ ಪ್ರದೇಶದಲ್ಲಿ ನಾಲ್ಕು ಜಾಗಗಳನ್ನ ಗುರುತಿಸಲಾಗಿದೆ. ಬಳಿಕ ನೇತ್ರಾವತಿ ಸ್ನಾನಘಟ್ಟದ ಬಲ ಬದಿಯಲ್ಲಿದ್ದ ಅಜಿಕುರಿ ರಸ್ತೆ ಬದಿಯ ಜಾಗದಲ್ಲೂ ಶವ ಹೂತಿಟ್ಟಿರೋದಾಗಿ ಅನಾಮಿಕ ವ್ಯಕ್ತಿ ಗುರುತಿಸಿದ್ದಾರೆ. ಸೋಮವಾರ ಒಟ್ಟು 15 ಸ್ಥಳಗಳನ್ನು ಗುರುತಿಸುವ ತಯಾರಿ ಎಸ್‌ಐಟಿ ನಡೆಸಿದ್ದರೂ ಕತ್ತಲಾದ ಹಿನ್ನೆಲೆಯಲ್ಲಿ 13 ಸ್ಥಳಗಳನ್ನ ಮಾತ್ರ ಗುರುತಿಸಲಾಗಿದೆ. ಇಂದು ಮತ್ತಷ್ಟು ಜಾಗಗಳ ಗುರುತಿಸೋ ಕೆಲಸ ಮುಂದುವರಿಯಲಿದೆ.
ಸೋಮವಾರ ಗುರುತಿಸಿರೋ ಎಲ್ಲಾ 13 ಜಾಗಗಳಿಗೂ ಎಸ್‌ಐಟಿ ವಿಶೇಷ ಭದ್ರತೆ ಕಲ್ಪಿಸಿದೆ. ಮಹಜರಿನ ಮೊದಲ ದಿನ 13 ಸ್ಥಳಗಳನ್ನು ಗುರುತಿಸಿದ ಸ್ಥಳಗಳ ದಾಖಲೀಕರಣ ಮಾಡಿದ ಎಸ್‌ಐಟಿ ಟೀಮ್ ಗುರುತಿಸಿದ ಎಲ್ಲಾ ಸ್ಥಳಗಳಲ್ಲಿ ಬಿಗಿ ಭದ್ರತೆ ಮಾಡಿದೆ. ಗುರುತಿಸಿದ ಪ್ರತಿ ಸ್ಥಳಕ್ಕೂ ತಲಾ 2 ಮಂದಿ ಶಸ್ತ್ರಸಜ್ಜಿತ ಸಿಬ್ಬಂದಿಗಳನ್ನ ನೇಮಕ ಮಾಡಿದ್ದು, ದಟ್ಟ ಅರಣ್ಯದಲ್ಲಿ ರಾತ್ರಿ ಹಗಲು ಸರ್ಪಗಾವಲು ಹಾಕಿದೆ. ಗುರುತಿಸಿದ ಜಾಗಗಳಿಗೆ ಟೇಪ್ ಹಾಕಿ, ಎಲ್ಲದಕ್ಕೂ ನಂಬರ್ ನೀಡಲಾಗಿದೆ. ಇಂದು ಮತ್ತೆ ಉಳಿದಿರೋ ಜಾಗಗಳ ಗುರುತಿಸುವ ಕೆಲಸ ನಡೆಯಲಿದ್ದು, ಬಳಿಕ ಎಲ್ಲವನ್ನ ಅಗೆಯುವ ತೀರ್ಮಾನವನ್ನು ಎಸ್‌ಐಟಿ ಮಾಡಿದೆ.