ಡೈಲಿ ವಾರ್ತೆ: 31/ಜುಲೈ/2025

ಧರ್ಮಸ್ಥಳದಲ್ಲಿ ಹೆಣ ಹೂತ ಪ್ರಕರಣ: ಆರನೇ ಸಮಾಧಿಯಲ್ಲಿ ಮನುಷ್ಯನ ತಲೆಬುರುಡೆ, ಹತ್ತಕ್ಕೂ ಹೆಚ್ಚು ಮೂಳೆಗಳು ಪತ್ತೆ.!

ಮಂಗಳೂರು : ಧರ್ಮಸ್ಥಳದಲ್ಲಿ ಹೆಣ ಹೂತ ಪ್ರಕರಣಕ್ಕೆ ಸಂಬಂಧಿಸಿ ಎಸ್‌ಐಟಿ ಅಧಿಕಾರಿಗಳು ನೇತ್ರಾವತಿ ಸ್ನಾನಘಟ್ಟದ ಬಳಿಯ ಕಾಡಿನಲ್ಲಿ ಸಮಾಧಿ ಅಗೆತ ನಡೆಸಿದ್ದು, ಆರನೇ ಪಾಯಿಂಟ್ ನಲ್ಲಿ ಮನುಷ್ಯನ ತಲೆಬುರುಡೆ ಮತ್ತು ಹತ್ತಕ್ಕೂ ಹೆಚ್ಚು ಎಲುಬಿನ ತುಂಡುಗಳು ಸಿಕ್ಕಿವೆ. ಮೂರು ದಿನಗಳಿಂದ ಐದು ಕಡೆ ಅಗೆಯಲಾಗಿದ್ದರೂ ಯಾವುದೇ ಸಾಕ್ಷ್ಯ ಸಿಕ್ಕಿರಲಿಲ್ಲ. ಗುರುವಾರ ತಲೆಬುರುಡೆ ಸಿಗುತ್ತಿದ್ದಂತೆ ದೂರುದಾರನ ಹೇಳಿಕೆಗೆ ಮಹತ್ವ ಬಂದಿದೆ.

ನೇತ್ರಾವತಿ ನದಿ ಪಕ್ಕ ಮತ್ತು ಮೂರನೇ ಪಾಯಿಂಟ್ ಬಳಿಯಲ್ಲೇ ಆರನೇ ಪಾಯಿಂಟ್ ಇದೆ. ದೂರುದಾರ ಗುರುತಿಸಿರುವ ಎಲ್ಲ ಪಾಯಿಂಟ್ ಗಳನ್ನೂ ನಂಬರ್‌ ಹಾಕಿದ್ದು, ಸದ್ಯಕ್ಕೆ 13 ಪಾಯಿಂಟ್ ಗುರುತಿಸಲಾಗಿದೆ. ಎಲ್ಲವೂ ನೇತ್ರಾವತಿ ಸ್ನಾನಘಟ್ಟದ ಬಳಿಯ ಕಾಡಿನಲ್ಲೇ ಇದೆ. ಆರನೇ ಪಾಯಿಂಟ್ ನಲ್ಲಿ ಮನುಷ್ಯನ ಅಸ್ಥಿಪಂಜರ ಸಿಗುತ್ತಿದ್ದಂತೆ ದೂರುದಾರ ವ್ಯಕ್ತಿ ಮತ್ತಷ್ಟು ಅಗೆಯುವಂತೆ ಕೋರಿಕೊಂಡಿದ್ದಾನೆ. ಅದರಂತೆ, ಅದೇ ಜಾಗವನ್ನೂ ಮತ್ತೂ ಅಗೆಯಲಾಗಿದ್ದು, ಹಲವಾರು ಮೂಳೆಗಳ ಚೂರುಗಳು ಮತ್ತು ತಲೆಬುರುಡೆಯೂ ಸಿಕ್ಕಿದೆ. ಅವನ್ನು ಸ್ಥಳದಲ್ಲಿರುವ ಎಫ್‌ಎಸ್‌ಎಲ್ ತಜ್ಞರು ಸಂಗ್ರಹಿಸಿದ್ದು ಪ್ರಯೋಗಾಲಯಕ್ಕೆ ಕಳುಹಿಸಿಕೊಟ್ಟಿದ್ದಾರೆ.

ಎಲುಬಿನ ದಪ್ಪ ಮತ್ತು ಸಾಂದ್ರತೆ ಗಮನಿಸಿ, ಇದು ಪುರುಷನ ಶವ ಎಂದು ಪ್ರಾಥಮಿಕ ಮಾಹಿತಿಯನ್ನು ಎಫ್‌ಎಸ್‌ಎಲ್ ತಜ್ಞರು ಸ್ಥಳದಲ್ಲಿದ್ದ ಅಧಿಕಾರಿಗಳ ಜೊತೆಗೆ ಹಂಚಿಕೊಂಡಿದ್ದಾರೆ. ಆದರೆ ಮೂಳೆ ಪುರುಷನದ್ದೇ, ಮಹಿಳೆಯದ್ದೇ ಎನ್ನುವುದನ್ನು ಪ್ರಯೋಗಾಲಯದಲ್ಲಿ ಪರೀಕ್ಷೆ ನಂತರವಷ್ಟೇ ದೃಢಪಡಿಸಬೇಕಾಗುತ್ತದೆ. ಸದ್ಯಕ್ಕೆ ಆರನೇ ಪಾಯಿಂಟ್ ನಲ್ಲಿ ಶವ ಹೂತಿರುವ ಬಗ್ಗೆ ಸಾಕ್ಷ್ಯ ಲಭಿಸಿದ್ದು, ಒಟ್ಟು ಪ್ರಕರಣಕ್ಕೆ ಒಂದಷ್ಟು ಬಲ ಸಿಕ್ಕಂತಾಗಿದೆ. ಮುಂದೆ 7, 8 ಹೀಗೆ 13 ಪಾಯಿಂಟ್ ಗಳನ್ನೂ ಅಗೆಯಲಾಗುತ್ತದೆ. ಆದರೆ ದೂರುದಾರನ ಹೇಳಿಕೆಯ ಪ್ರಕಾರ, 8ರಿಂದ 11ರ ವರೆಗಿನ ಸಮಾಧಿಗಳಲ್ಲಿ ಹಲವಾರು ಶವಗಳನ್ನು ಹೂತಿಟ್ಟಿದ್ದಾಗಿ ಮಾಹಿತಿ ಇದೆ.

ಎಫ್‌ಎಸ್‌ಎಲ್ ತಜ್ಞ ಡಾ.ದಿನೇಶ್ ರಾವ್ ಹೇಳುವ ಪ್ರಕಾರ, ನದಿ ಪಕ್ಕದಲ್ಲಿ ಇರುವ ಜಾಗವಾದ್ದರಿಂದ ಅಲ್ಲಿ ಶವಗಳನ್ನು ಹೂತರೆ ನೀರಿನ ತೇವಾಂಶದಿಂದಾಗಿ ಮಾಂಸ, ಮೂಳೆಗಳು ಬೇಗ ಕೊಳೆಯುವುದಂತೆ. ಅಲ್ಲಿರುವ ಮೂಳೆ ಇನ್ನಿತರ ಅವಶೇಷಗಳು ನದಿ ನೀರಿನಲ್ಲಿ ಕೊಚ್ಚಿ ಹೋಗುವ ಸಾಧ್ಯತೆಯೂ ಇದೆಯಂತೆ. ಇದಲ್ಲದೆ, ಕಾಡಿನ ಮಧ್ಯ ಇರುವುದರಿಂದ 15-20 ವರ್ಷಗಳಲ್ಲಿ ಆ ಜಾಗ ಗುರುತು ಹಾಕುವುದರಲ್ಲಿ ಮಿಸ್ ಹೊಡೆದಿರಲೂ ಬಹುದು. ಸಮಾಧಿ ಸ್ಥಳದಲ್ಲಿ ಗಿಡ ಗಂಟಿ ಬೆಳೆದು ಅಗೆದ ಜಾಗ ಬದಲಾಗಿರಲೂ ಬಹುದು. ಕಾಡಿನ ಮಧ್ಯೆ ಶವ ಹೂತಿಟ್ಟ ಜಾಗದಲ್ಲಿ ಖಚಿತವಾಗಿ ಅಗೆದರೆ 20 ವರ್ಷ ಕಳೆದರೂ ಮೂಳೆಗಳು ಸಿಕ್ಕೇ ಸಿಗಬೇಕು ಎನ್ನುತ್ತಾರೆ.

ಇದೇ ವೇಳೆ, ಒಂದನೇ ಮಾರ್ಕ್ ನಲ್ಲಿ ಅಗೆದ ಸಂದರ್ಭದಲ್ಲಿ ಪತ್ತೆಯಾಗಿದ್ದ ಎಟಿಎಂ ಕಾರ್ಡ್, ಪಾನ್ ಕಾರ್ಡ್ ಆಧರಿಸಿ ಪೊಲೀಸರು ತನಿಖೆ ನಡೆಸಿದ್ದು, ಆ ಕಾರ್ಡ್ ಹೊಂದಿದ್ದ ಯುವಕನ ತಂದೆಯನ್ನು ಸಂಪರ್ಕಿಸಿದ್ದಾರೆ ಎನ್ನಲಾಗಿದೆ. ಆ ಯುವಕ ಜಾಂಡಿಸ್ ಕಾಯಿಲೆಗೆ ತುತ್ತಾಗಿ ಒಂದು ವರ್ಷದ ಹಿಂದಷ್ಟೇ ಮೃತಪಟ್ಟಿದ್ದಾಗಿ ಮಾಹಿತಿ ಸಿಕ್ಕಿದೆಯೆಂದು ಹೇಳಲಾಗುತ್ತಿದೆ. ಆದರೆ ಪಾನ್ ಕಾರ್ಡ್ ಸ್ಥಳಕ್ಕೆ ಬಂದಿರುವುದು ಹೇಗೆ ಎನ್ನುವ ಬಗ್ಗೆ ತಿಳಿದಿಲ್ಲ. ಈ ಕುರಿತಾಗಿ ಎಸ್‌ಐಟಿ ಕಡೆಯಿಂದ ಅಧಿಕೃತ ಮಾಹಿತಿಯನ್ನೂ ನೀಡಲಾಗಿಲ್ಲ.