


ಡೈಲಿ ವಾರ್ತೆ: 01/ಆಗಸ್ಟ್/ 2025


ಬಾಲಕನ ಅಪಹರಿಸಿ ಬರ್ಬರ ಹತ್ಯೆ: ದುಷ್ಕರ್ಮಿ ಗಳ ಕಾಲಿಗೆ ಗುಂಡೇಟು – ಇಬ್ಬರು ಆರೋಪಿಗಳ ಬಂಧನ

ಬೆಂಗಳೂರು: ಟ್ಯೂಷನ್ ಮುಗಿಸಿ ಮನೆಗೆ ಬರುತ್ತಿದ್ದ ಬಾಲಕ ನಿಶ್ಚಿತ್‌ನನ್ನು ಅಪಹರಿಸಿ, ಬರ್ಬರವಾಗಿ ಹತ್ಯೆಗೈದ ಇಬ್ಬರು ಆರೋಪಿಗಳ ಕಾಲಿಗೆ ಹುಳಿಮಾವು ಠಾಣೆ ಪೊಲೀಸರು ಗುಂಡು ಹಾರಿಸಿ, ಹೆಡೆಮುರಿ ಕಟ್ಟಿದ್ದಾರೆ. ಗುರುಮೂರ್ತಿ ಹಾಗೂ ಗೋಪಾಲಕೃಷ್ಣ ಎಂಬ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.
ಗುರುವಾರ ತಡರಾತ್ರಿ ಕಗ್ಗಲೀಪುರ ರಸ್ತೆಯ ಬಳಿಯಿದ್ದ ಆರೋಪಿಗಳನ್ನು ವಶಕ್ಕೆ ಪಡೆಯಲು ಹುಳಿಮಾವು ಠಾಣೆ ಪೊಲೀಸರು ತೆರಳಿದ್ದರು. ಈ ವೇಳೆ ಮಾರಕಾಸ್ತ್ರಗಳನ್ನು ಬಳಸಿ ಆರೋಪಿಗಳು ಪೊಲೀಸರ ಮೇಲೆ ದಾಳಿಗೆ ಮುಂದಾದಾಗ, ಇನ್ಸ್‌ಪೆಕ್ಟರ್ ಕುಮಾರಸ್ವಾಮಿ ಹಾಗೂ ಪಿಎಸ್ಐ ಅರವಿಂದ್ ಕುಮಾರ್ ಆರೋಪಿಗಳ ಕಾಲಿಗೆ ಗುಂಡು ಹಾರಿಸುವ ಮೂಲಕ ವಶಕ್ಕೆ ಪಡೆದಿದ್ದಾರೆ. ಘಟನೆಯಲ್ಲಿ ಗುರುಮೂರ್ತಿಯ ಎರಡು ಕಾಲುಗಳು ಹಾಗೂ ಗೋಪಾಲಕೃಷ್ಣನ ಒಂದು ಕಾಲಿಗೆ ಗುಂಡು ತಗುಲಿದ್ದು, ಇಬ್ಬರನ್ನೂ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪ್ರಕರಣದ ವಿವರ: ಬೆಂಗಳೂರಿನ ಅರಕೆರೆಯ ಶಾಂತಿನಿಕೇತನ ಲೇಔಟ್‌ನಲ್ಲಿ ನಿಶ್ಚಿತ್ ಮತ್ತು ಆತನ ಪೋಷಕರು ವಾಸವಾಗಿದ್ದರು. ನಗರದ ಪ್ರತಿಷ್ಠಿತ ಕಾಲೇಜ್‌ನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದ ನಿಶ್ಚಿತ್ ತಂದೆಯ ಬಳಿ ಆರೋಪಿ ಗುರುಮೂರ್ತಿ ಹೆಚ್ಚುವರಿ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದ. ಆಗಾಗ ಮನೆಗೆ ಹೋಗಿ ಬರುತ್ತಿದ್ದ ಗುರುಮೂರ್ತಿ, ನಿಶ್ಚಿತ್‌ನನ್ನು ಅಪಹರಿಸಿ ಹಣಕ್ಕೆ ಬೇಡಿಕೆಯಿಡುವ ಸಂಚು ರೂಪಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಬುಧವಾರ ಸಂಜೆ ಟ್ಯೂಷನ್ ಮುಗಿಸಿ ಸೈಕಲ್‌ನಲ್ಲಿ ಮನೆಯತ್ತ ಬರುತ್ತಿದ್ದ ನಿಶ್ಚಿತ್‌ನನ್ನು ಆರೋಪಿಗಳು ಅಪಹರಿಸಿದ್ದರು. ಟ್ಯೂಷನ್ ಮುಗಿದು ಸುಮಾರು ಗಂಟೆಗಳಾದರೂ ಮನೆಗೆ ಬಾರದ ಮಗನ ಬಗ್ಗೆ ಪೋಷಕರು ಆಂತಕದಿಂದ ಹುಡುಕಾಟ ನಡೆಸಿದ್ದರು. ನಿರಂತರ ಶೋಧದ ಬಳಿಕವೂ ಮಗನ ಸುಳಿವು ಸಿಗದಿದ್ದಾಗ ಹುಳಿಮಾವು ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಅಷ್ಟೊತ್ತಿಗಾಗಲೇ ಬಾಲಕನ ತಂದೆಗೆ ಕರೆ ಮಾಡಿದ್ದ ಆರೋಪಿಗಳು ‘ಮಗನನ್ನ ಜೀವಂತವಾಗಿ ನೋಡುವ ಆಸೆಯಿದ್ದರೆ, 5 ಲಕ್ಷ ರೂ ನೀಡುವಂತೆ’ ಡಿಮ್ಯಾಂಡ್ ಮಾಡಿದ್ದರು. ಹಣ ನೀಡುವುದಾಗಿ ಪೋಷಕರೂ ಸಹ ಒಪ್ಪಿಕೊಂಡಿದ್ದರು. ಇತ್ತ ವಿಷಯ ತಿಳಿದ ಪೊಲೀಸರು ಅಪಹರಣಕಾರರ ಪೋನ್ ಕರೆ ಆಧರಿಸಿ ತನಿಖೆ ಆರಂಭಿಸಿದ್ದರು. ಆದರೆ ಅಷ್ಟರಲ್ಲಾಗಲೇ ಬನ್ನೇರುಘಟ್ಟ ಅರಣ್ಯ ಪ್ರದೇಶದಲ್ಲಿ ಕತ್ತು ಕೊಯ್ದು, ಸುಟ್ಟ ಸ್ಥಿತಿಯಲ್ಲಿ ಬಾಲಕನ ಶವ ಪತ್ತೆಯಾಗಿದೆ. ಮುಖ ಚಹರೆ ತಿಳಿಯದಿರಲು ಪೆಟ್ರೋಲ್ ಸುರಿದ ಬೆಂಕಿ ಹಚ್ಚಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿತ್ತು. ಸ್ಥಳಕ್ಕೆ ಎಲೆಕ್ಟ್ರಾನಿಕ್ ಸಿಟಿ ಉಪವಿಭಾಗದ ಡಿಸಿಪಿ ನಾರಾಯಣ್ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಎಸ್‌ಪಿ ಸಿ.ಕೆ. ಬಾಬಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
ಅಪರಾಧ ಹಿನ್ನೆಲೆ ಹೊಂದಿರುವ ಗುರುಮೂರ್ತಿ ಈ ಅಪಹರಣಕ್ಕೆ ಸಂಚು ರೂಪಿಸಿದ್ದ ಎಂದು ತಿಳಿದು ಬಂದಿದೆ. ಆದರೆ ಕೃತ್ಯಕ್ಕೆ ಕಾರಣವೇನು, ಇನ್ನೂ ಯಾರಾದರೂ ಭಾಗಿಯಾಗಿದ್ದಾರಾ ಎಂಬುದರ ಕುರಿತು ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.