


ಡೈಲಿ ವಾರ್ತೆ: 01/ಆಗಸ್ಟ್/ 2025


ಮಣಿಪಾಲ| ಶಾಲಾ ವಾಹನ ಚಾಲನೆ ವೇಳೆ ಹೃದಯಾಘಾತ: ಚಾಲಕ ಮೃತ್ಯು, ತಪ್ಪಿದ ದೊಡ್ಡ ದುರಂತ!

ಮಣಿಪಾಲ: ಪ್ರಗತಿನಗರದ ಕೇಂದ್ರ ವಿದ್ಯಾಲಯಕ್ಕೆ ವಿದ್ಯಾರ್ಥಿಗಳನ್ನು ಸಾಗಿಸುತ್ತಿದ್ದ ಟಿ.ಟಿ ವಾಹನದ ಚಾಲಕ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಆ.1.ರಂದು ಶುಕ್ರವಾರ ಬೆಳಿಗ್ಗೆ ನಡೆದಿದೆ.
ಮೃತ ಚಾಲಕ ಕಾರ್ಕಳ ನೀರೆ ಬೈಲೂರಿನ ಮೊಯ್ದಿನ್ ಬಾವ (65) ಎಂದು ತಿಳಿದುಬಂದಿದೆ.
ವಿದ್ಯಾರ್ಥಿಗಳನ್ನು ಶಾಲೆಗೆ ಸಾಗಿಸುತ್ತಿರುವಾಗ ಚಾಲಕನಿಗೆ ಎದೆ ನೋವು ಕಾಣಿಸಿಕೊಂಡಿದೆ, ಮಾರುಥಿ ವೀಥಿಕಾದಲ್ಲಿ ನಡೆದು ಸಾಗುತ್ತಿದ್ದ ಸಮಾಜಸೇವಕ ನಿತ್ಯಾನಂದ ಒಳಕಾಡುವರನ್ನು ಕಂಡು, ವಾಹನ ನಿಲ್ಲಿಸಿದ ಚಾಲಕ, ಎದೆನೋವಿನ ವಿಚಾರವನ್ನು ಒಳಕಾಡುವರಲ್ಲಿ ಹೇಳಿಕೊಂಡಿದ್ದಾನೆ. ತಕ್ಷಣ ಒಳಕಾಡು ಅವರು ಅಂಬುಲೆನ್ಸ್ ವಾಹನದಲ್ಲಿ ಚಾಲಕನನ್ನು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ಸಾಗಿಸಿದ್ದರು. ಪರೀಕ್ಷಿಸಿದ ವೈದ್ಯರಿಂದ ಚಾಲಕ ಮೃತಪಟ್ಟಿರುವುದು ತಿಳಿದುಬಂದಿತು.
ವಿದ್ಯಾರ್ಥಿಗಳಿರುವ ಶಾಲಾವಾಹನ ಚಾಲನೆಯಲ್ಲಿದ್ದಾಗ ಚಾಲಕ ಮೃತಪಟ್ಟಿದ್ದಲ್ಲಿ ದೊಡ್ಡಮಟ್ಟದ ಅವಘಡ ಸಂಭವಿಸುತ್ತಿತ್ತು.