ಡೈಲಿ ವಾರ್ತೆ: 01/ಆಗಸ್ಟ್/ 2025

ಕ್ರೈಸ್ತ ಸನ್ಯಾಸಿಗಳ ಬಂಧನ ಖಂಡಿಸಿ ಆ.4 ರಂದು ಮಂಗಳೂರಿನಲ್ಲಿ ಕ್ರೈಸ್ತ ಸಮಾಜದಿಂದ ಪ್ರತಿಭಟನೆಗೆ
ಕರೆ

ಮೂಡುಬಿದಿರೆ: ಮಾನವ ಸಾಗಣೆಯ ಆರೋಪದಲ್ಲಿ ಛತ್ತೀಸ್‌ಘಡ್ ದಲ್ಲಿ ಇಬ್ಬರು ಕ್ರೈಸ್ತ ಸನ್ಯಾಸಿಗಳನ್ನು ಬಂಧಿಸಿರುವುದಕ್ಕೆ ಮೂಡುಬಿದಿರೆ ವಲಯ ಕ್ಯಾಥೋಲಿಕ್ ಸಭಾ ಖಂಡಿಸಿದೆ.

ಕ್ಯಾಥೊಲಿಕ್ ಸಭಾದ ಮಾಜಿ ಸಂಚಾಲಕ ರಾಜೇಶ್ ಕಡಲಕೆರೆ ಅವರು ಗುರುವಾರ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.

ಕೇರಳದ ಸನ್ಯಾಸಿನಿಯರಾದ ಪ್ರೀತಿ ಮೇರಿ ಮತ್ತು ವಂದನ ಫ್ರಾನ್ಸಿಸ್ ಅವರು ಇಬ್ಬರು ಮಹಿಳೆಯರನ್ನು ಅವರ ಪೋಷಕರ ಲಿಖಿತ ಒಪ್ಪಿಗೆ ಮೇರೆಗೆ ಕಾನ್ವೆಂಟ್ ಮನೆ ಕೆಲಸಕ್ಕಾಗಿ ಕರೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಛತ್ತೀಸ್‌ಘಡ್ ಪೊಲೀಸರು ಅವರನ್ನು ರೈಲ್ವೆ ನಿಲ್ದಾಣದಲ್ಲಿ ಬಂಧಿಸಿ ಜೈಲಿಗೆ ಕಳಿಸಿದ್ದಾರೆ. ಪೊಲೀಸರು ಕಾನೂನು ಸಮ್ಮತವಲ್ಲದ ರೀತಿಯಲ್ಲಿ ವರ್ತಿಸಿದ್ದು ಈ ಘಟನೆಯಿಂದ ಕ್ರೈಸ್ತ ಸಮುದಾಯಕ್ಕೆ ನೋವಾಗಿದೆ. ಅಲ್ಲಿನ ಸರ್ಕಾರ ಮಧ್ಯಪ್ರವೇಶಿಸಿ ಬಂಧಿತ ಸನ್ಯಾಸಿಗಳಿಬ್ಬರನ್ನು ಜೈಲಿನಿಂದ ಬಿಡುಗಡೆಗೊಳಿಸಬೇಕೆಂದು ಆಗ್ರಹಿಸಿದರು.

ಮೂಡುಬಿದಿರೆ ಕೆಥೊಲಿಕ್ ಸಭಾದ ಅಧ್ಯಕ್ಷ ಅಲ್ವಿನ್ ರೋಡ್ರಿಗಸ್ ಮಾತನಾಡಿ ಕ್ರೈಸ್ತ ಸನ್ಯಾಸಿಗಳಿಬ್ಬರ ಬಂಧನವನ್ನು ವಿರೋಧಿಸಿ ಆ. 4ರಂದು ಮಂಗಳೂರು ಕ್ರೈಸ್ತ ಧರ್ಮ ಪ್ರಾಂತದ ಅಧೀನದಲ್ಲಿ ಬರುವ ವಿವಿಧ ಚರ್ಚ್ ಗಳ ಹಾಗೂ ಸಮಾನ ಮನಸ್ಕರ ವತಿಯಿಂದ ಮಂಗಳೂರಿನ ಮಿನಿ ವಿಧಾನ ಸೌಧದ ಎದುರು ನಡೆಯಲಿರುವ ಪ್ರತಿಭಟನೆಯಲ್ಲಿ ಮೂಡುಬಿದಿರೆಯಿಂದ ಸುಮಾರು 2 ಸಾವಿರ ಕ್ರೈಸ್ತರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.