


ಡೈಲಿ ವಾರ್ತೆ: 04/ಆಗಸ್ಟ್/ 2025


ಉಪ್ಪುಂದ: ಮೀನುಗಾರಿಕೆಗೆ ತೆರಳಿದ್ದ ದೋಣಿ ಪಲ್ಟಿ: 9 ಮಂದಿ ಮೀನುಗಾರರು ಪಾರು!

ಉಪ್ಪುಂದ: ಮೀನುಗಾರಿಕೆಗೆ ತೆರಳುತ್ತಿದ್ದ ಸಂದರ್ಭ ದೋಣಿ ಮಗುಚಿದ್ದು, ಮೀನುಗಾರರು ಅಪಘಾತದಿಂದ ಪಾರಾದ ಘಟನೆ ಬೈಂದೂರು ತಾಲೂಕಿನ ಉಪ್ಪುಂದದಲ್ಲಿ ಸಂಭವಿಸಿದೆ.
ಅವಘಡದಲ್ಲಿ 9 ಮಂದಿ ಮೀನುಗಾರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಶಾರದಾ ಅವರ ಮಾಲಕತ್ವದ ದೋಣಿಯಲ್ಲಿ 9 ಮೀನುಗಾರರು ಆ. 3ರಂದು ಬೆಳಗ್ಗೆ ಉಪ್ಪುಂದ ಗ್ರಾಮದ ಮಡಿಕಲ್ ಕಡಲ ತೀರದಲ್ಲಿ ಸಮುದ್ರಕ್ಕೆ ತೆರಳುತ್ತಿದ್ದರು. ಆ ಸಮಯದಲ್ಲಿ ಬೃಹತ್ ಅಲೆಗಳು ದೋಣಿಗೆ ಅಪ್ಪಳಿಸಿತು. ಕ್ಷಣಾರ್ಧದಲ್ಲಿ ದೋಣಿ ಮಗುಚಿ ಬಿದ್ದು ಮೀನುಗಾರರು ಸಮುದ್ರಕ್ಕೆ ಬಿದ್ದರು. ಮೀನುಗಾರರು ಲೈಫ್ ಜಾಕೆಟ್ ಧರಿಸಿದ್ದರಿಂದ ಅವರಿಗೆ ಈಜಲು ಸುಲಭವಾಯಿತು.
ಪ್ರಜ್ವಲ್ ಖಾರ್ವಿ, ಪ್ರಮೋದ್ ಖಾರ್ವಿ, ಗೌತಮ್ ಖಾರ್ವಿ, ಭಾಸ್ಕರ್‌ಖಾರ್ವಿ, ಯೋಗಿರಾಜ್ ಖಾರ್ವಿ, ಗೋವಿಂದ ಖಾರ್ವಿ, ಬಾಬು ಖಾರ್ವಿ, ದೀಪಕ್ ಖಾರ್ವಿ ಈಜಿ ದಡ ಸೇರಿದ್ದರು. ಸ್ಥಳೀಯರು ಪರ್ಯಾಯ ದೋಣಿ ಮೂಲಕ ಹಗ್ಗ ಬಳಸಿ ದೋಣಿಯನ್ನು ದಡಕ್ಕೆ ತಂದು ಸಮುದ್ರದಲ್ಲಿ ಕೊಚ್ಚಿ ಹೋಗುವುದನ್ನು ತಪ್ಪಿಸಿದರು. ಕಡಲಾರ್ಭಟಕ್ಕೆ ದೋಣಿ ಮಗುಚಿದ್ದು, ದೋಣಿಯ ಎಂಜಿನ್ ಹಾಗೂ ದೋಣಿಗೆ ಹಾನಿ ಉಂಟಾಗಿದೆ. ದೋಣಿಯಲ್ಲಿ ಇರುವ ಬಲೆಗಳು ಸಮುದ್ರದಲ್ಲಿ ಕೊಚ್ಚಿ ಹೋಗಿ ರೂ.5.50 ಲಕ್ಷಕ್ಕೂ ಹೆಚ್ಚು ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.