ಡೈಲಿ ವಾರ್ತೆ: 04/ಆಗಸ್ಟ್/ 2025

ಮಂಗಳೂರು ವಿಶ್ವವಿದ್ಯಾಲಯ ವಿಭಾಗದ ಸರ್ಕಾರಿ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರ ಕೊರತೆ: ತರಗತಿಗಳಿಗೆ ಗಂಭೀರ ಸಂಕಷ್ಟ, ಗೌರವಧನರಹಿತ ಸೇವೆಗೆ ಒತ್ತಾಯದ ವಿರುದ್ಧ ಆಕ್ರೋಶ

ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯ ವ್ಯಾಪ್ತಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಹೊಸ ಶೈಕ್ಷಣಿಕ ವರ್ಷ ಆರಂಭವಾದರೂ ತರಗತಿಗಳ ನಿರ್ವಹಣೆಯಲ್ಲಿ ಗಂಭೀರ ಸಂಕಷ್ಟ ಉಂಟಾಗಿದೆ. ಜುಲೈ 25ರಿಂದ ಶೈಕ್ಷಣಿಕ ವರ್ಷ ಆರಂಭವಾದರೂ, ಅತಿಥಿ ಉಪನ್ಯಾಸಕರ ನೇಮಕಾತಿ ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲ. ಆಗಸ್ಟ್ 2ರಂದು ಹಿಂದಿನ ಹತ್ತು ತಿಂಗಳ ಸೇವಾ ಅವಧಿ ಮುಕ್ತಾಯವಾದ ಹಿನ್ನೆಲೆಯಲ್ಲಿ ಈಗ ಬಹುತೇಕ ಕಾಲೇಜುಗಳು ಅತಿಥಿ ಉಪನ್ಯಾಸಕರಿಲ್ಲದೆ ಕಾರ್ಯನಿರ್ವಹಿಸಲು ಅಸಾಧ್ಯವಾಗಿದೆ. ಈ ಕಾರಣದಿಂದ ವಿದ್ಯಾರ್ಥಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.

ಅತಿಥಿ ಉಪನ್ಯಾಸಕರ ನೇಮಕಾತಿಯ ವಿಳಂಬವು ತರಗತಿಗಳ ಮೇಲೆ ನೇರ ಪರಿಣಾಮ ಬೀರಿದ್ದು, ತರಗತಿಗಳನ್ನು ನಿರ್ವಹಿಸಲು ಕಾಲೇಜುಗಳಲ್ಲಿ ಶಿಕ್ಷಕರ ಕೊರತೆಯು ಗಂಭೀರ ಸಮಸ್ಯೆಯಾಗಿದೆ. ಕೆಲ ಕಾಲೇಜುಗಳಲ್ಲಿ ನಿಯೋಜಿತ ಶಾಶ್ವತ ಉಪನ್ಯಾಸಕರು ಮಾತ್ರ ಇದ್ದು, ಅವರು ಎಲ್ಲಾ ವಿಷಯಗಳನ್ನು ಬೋಧಿಸಲು ಅಸಾಧ್ಯವಾಗಿದೆ. ಇದರಿಂದ ವಿದ್ಯಾರ್ಥಿಗಳ ವಿದ್ಯಾಭ್ಯಾಸ ಹಿನ್ನಡೆಯಾಗುವ ಭೀತಿ ವ್ಯಕ್ತವಾಗಿದೆ.

ಈ ಹಿನ್ನೆಲೆಯಲ್ಲಿ ರಾಜ್ಯ ಮತ್ತು ಜಿಲ್ಲಾ ಮಟ್ಟದ ಮುಖಂಡರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಶೇಷವಾಗಿ, ಯಾವುದೇ ಸಂಬಳವಿಲ್ಲದೆ ಅತಿಥಿ ಉಪನ್ಯಾಸಕರನ್ನು ತರಗತಿಗಳಿಗೆ ಹಾಜರಾಗಲು ಒತ್ತಾಯಿಸುವುದು ಅಸಮಾನ್ಯ ಕ್ರಮ ಎಂದು ಟೀಕಿಸಲಾಗಿದೆ. ಉಡುಪಿ ಜಿಲ್ಲೆಯ ಅತಿಥಿ ಉಪನ್ಯಾಸಕರ ಸಂಘದ ಮುಖಂಡರಾದ ಮಣಿಕಂಠ ಎಸ್. ದೇವಾಡಿಗ, ಬೈಂದೂರು ಅವರು, “ಅತಿಥಿ ಉಪನ್ಯಾಸಕರು ಈಗಾಗಲೇ ಅಸ್ಥಿರ ಸೇವಾ ಪರಿಸ್ಥಿತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಯಾವುದೇ ಭದ್ರತೆ ಇಲ್ಲದಿರುವಾಗ ಉಚಿತವಾಗಿ ತರಗತಿಗಳನ್ನು ತೆಗೆದುಕೊಳ್ಳಲು ಹೇಳುವುದು ಅತಿಯಾದ ಅನ್ಯಾಯ,” ಎಂದು ತಿಳಿಸಿದ್ದಾರೆ.
“ಒಂದು ಕಡೆ ಸರ್ಕಾರ ಸರ್ಕಾರಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಯನ್ನು ಹೆಚ್ಚಿಸುವತ್ತ ಒತ್ತಾಯಿಸುತ್ತದೆ. ಆದರೆ ಮತ್ತೊಂದು ಕಡೆ ಅತಿಥಿ ಉಪನ್ಯಾಸಕರ ಸೇವಾ ಅವಧಿಯನ್ನು ಮುಕ್ತಾಯಗೊಳಿಸಿ, ಹೊಸ ನೇಮಕಾತಿ ಪ್ರಕ್ರಿಯೆಯನ್ನು ವಿಳಂಬಗೊಳಿಸುವ ಮೂಲಕ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅಡ್ಡಿ ಉಂಟುಮಾಡುತ್ತಿದೆ. ಇದು ಶಿಕ್ಷಣದ ಗುಣಮಟ್ಟವನ್ನು ಕುಗ್ಗಿಸುವಂತಾಗಿದೆ,” ಎಂದು ಹೇಳಿದರು.

ಅತಿಥಿ ಉಪನ್ಯಾಸಕರಿಗೆ ಈ ಸ್ಥಿತಿ ತೀವ್ರ ನಿರಾಶೆಯನ್ನುಂಟುಮಾಡಿದೆ. ಹಲವರು ದಿನನಿತ್ಯದ ಖರ್ಚು ನಿರ್ವಹಿಸಲು ಸಹ ಕಷ್ಟಪಡುವ ಪರಿಸ್ಥಿತಿಯಲ್ಲಿ ಇದ್ದಾರೆ. “ಹತ್ತು ತಿಂಗಳು ಗೌರವಧನ ಪಡೆಯುತ್ತಿದ್ದರೂ ಉಳಿದ ಎರಡು ತಿಂಗಳು ನಮಗೆ ಆದಾಯವಿಲ್ಲದೆ ಕಳೆಯಬೇಕಾಗಿದೆ. ಈಗ ನೇಮಕಾತಿ ವಿಳಂಬವಾದ ಕಾರಣ ಮತ್ತಷ್ಟು ಆರ್ಥಿಕ ಒತ್ತಡ ಎದುರಿಸುತ್ತಿದ್ದೇವೆ,” ಎಂದು ಕೆಲವು ಅತಿಥಿ ಉಪನ್ಯಾಸಕರು ತಮ್ಮ ಆತಂಕವನ್ನು ವ್ಯಕ್ತಪಡಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಸರ್ಕಾರ ತಕ್ಷಣವೇ ಕ್ರಮ ಕೈಗೊಂಡು ಅತಿಥಿ ಉಪನ್ಯಾಸಕರ ನೇಮಕಾತಿ ಪ್ರಕ್ರಿಯೆಯ ಬದಲು ಹಿಂದೆ ಉಪನ್ಯಾಸ ಮಾಡಿರುವರನ್ನು 2025-26 ರನೇ ಸಾಲಿಗೆ ಮುಂದುವರಿಯಲಿ ಎಂಬುದು ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪಾಲಕರ ಒತ್ತಾಯವಾಗಿದೆ. ನೇಮಕಾತಿ ಕಾರ್ಯ ಪ್ರಕ್ರಿಯ ವಿಳಂಬ, ಕಾಲೇಜುಗಳಲ್ಲಿ ಪಾಠಗಳು ಆರಂಭವಾಗದೇ ಬಾಕಿ ಉಳಿದಿದ್ದು, ಪಠ್ಯಕ್ರಮ ಹಿನ್ನಡೆಯಾಗುವ ಭೀತಿ ಹೆಚ್ಚಾಗಿದೆ.

ಜಿಲ್ಲಾ ಮಟ್ಟದ ಶಿಕ್ಷಣ ಇಲಾಖೆ ಅಧಿಕಾರಿಗಳು ಕೂಡ ಈ ಸಮಸ್ಯೆಯ ಗಂಭೀರತೆಯನ್ನು ಒಪ್ಪಿಕೊಂಡಿದ್ದಾರೆ. “ಅತಿಥಿ ಉಪನ್ಯಾಸಕರನ್ನು ಮುಂದುವರಿಸಿದರೆ ತರಗತಿಗಳ ಸ್ಥಿತಿ ಸುಧಾರಿಸಬಹುದು. ಈಗಿನ ಪರಿಸ್ಥಿತಿ ವಿದ್ಯಾರ್ಥಿಗಳಿಗೆ ನಷ್ಟ ಉಂಟುಮಾಡುವಂತಾಗಿದೆ,” ಎಂದು ಅವರು ತಿಳಿಸಿದ್ದಾರೆ.

ಇನ್ನೊಂದೆಡೆ, ವಿದ್ಯಾರ್ಥಿ ಸಂಘಟನೆಗಳೂ ಕೂಡ ಸರ್ಕಾರದ ವಿರುದ್ಧ ಧ್ವನಿ ಎತ್ತಿವೆ. ವಿದ್ಯಾರ್ಥಿ ಪ್ರತಿನಿಧಿಗಳು, “ಅತಿಥಿ ಉಪನ್ಯಾಸಕರ ಕೊರತೆಯಿಂದ ನಮ್ಮ ಅಧ್ಯಯನದಲ್ಲಿ ದೊಡ್ಡ ಅಡಚಣೆ ಉಂಟಾಗಿದೆ. ಶೀಘ್ರವೇ ನೇಮಕಾತಿ ಪ್ರಕ್ರಿಯೆ ಪೂರ್ಣವಾಗಲಿ ಎಂದು ಕೇಳಿಕೊಳ್ಳುತ್ತಿದ್ದಾರೆ.

ಅತಿಥಿ ಉಪನ್ಯಾಸಕರ ನೇಮಕಾತಿ ಸಮಸ್ಯೆ ಮಂಗಳೂರು ವಿಶ್ವವಿದ್ಯಾಲಯ ವ್ಯಾಪ್ತಿಯಷ್ಟೇ ಅಲ್ಲದೆ ರಾಜ್ಯದಾದ್ಯಂತ ಗಂಭೀರವಾಗಿದೆ. ಹಲವು ಕಾಲೇಜುಗಳ ಪ್ರಾಂಶುಪಾಲರು ತರಗತಿಗಳನ್ನು ಹೇಗೆ ನಿರ್ವಹಿಸಬೇಕು ಎಂಬ ದಿಕ್ಕು ತಪ್ಪಿದ್ದಾರೆ. ಶಿಕ್ಷಕರ ಕೊರತೆಯಿಂದಾಗಿ ಬೋಧನಾ ಗುಣಮಟ್ಟ ಕುಸಿಯುವ ಆತಂಕ ವ್ಯಕ್ತವಾಗಿದೆ.

ಶಿಕ್ಷಣ ತಜ್ಞರ ಅಭಿಪ್ರಾಯದಂತೆ, “ಸರ್ಕಾರವು ಶಾಶ್ವತ ಪರಿಹಾರಕ್ಕಾಗಿ ತಕ್ಷಣ ಕ್ರಮ ಕೈಗೊಳ್ಳಬೇಕು. ಅತಿಥಿ ಉಪನ್ಯಾಸಕರಿಗೆ ಗೌರವಧನವನ್ನು ಹತ್ತು ತಿಂಗಳ ಬದಲಾಗಿ ಹನ್ನೆರಡು ತಿಂಗಳಿಗೆ ನೀಡಬೇಕು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರ ನೇಮಕಾತಿಯ ಈ ವಿಳಂಬವು ಶಿಕ್ಷಣದ ಗುಣಮಟ್ಟದ ಮೇಲೆ ನೇರ ಪರಿಣಾಮ ಬೀರುತ್ತಿರುವುದರಿಂದ ಸರ್ಕಾರ ಶೀಘ್ರ ಕ್ರಮ ಕೈಗೊಳ್ಳುವುದು ಅತ್ಯಗತ್ಯವಾಗಿದೆ.