ಡೈಲಿ ವಾರ್ತೆ: 05/ಆಗಸ್ಟ್/ 2025

ಶಿರ್ವ| ಕುಖ್ಯಾತ ಅಂತರ್ ಜಿಲ್ಲಾ ಕಳ್ಳ ಇತ್ತೆ ಬರ್ಪೆ ಅಬೂಬಕ್ಕರ್‌ ಬಂಧನ – ಲಕ್ಷಾಂತರ ಮೌಲ್ಯದ ಚಿನ್ನಾಭರಣ ವಶಕ್ಕೆ

ಶಿರ್ವ: ಕುಖ್ಯಾತ ಅಂತರ್ ಜಿಲ್ಲಾ ಕಳ್ಳ ಇತ್ತೆ ಬರ್ಪೆ
ಅಬೂಬಕ್ಕರ್‌ನನ್ನು ಬಂಧಿಸಿದ್ದ ಶಿರ್ವ ಪೊಲೀಸರ ತಂಡ ಆತ ಕಳವು ಮಾಡಿದ ಚಿನ್ನಾಭರಣಗಳನ್ನು ಮಾರಾಟ ಮಾಡಲು ನೀಡಿದ್ದ ಆರೋಪಿ ಉಪ್ಪಳ್ಳಿಯ ಕೆ .ಇ .ಮೊಹಮ್ಮದ್‌ ಎಂಬಾತನನ್ನು ಬಂಧಿಸಿ ಒಟ್ಟು ರೂ. 22.32 ಲ.ರೂ.ಮೌಲ್ಯದ 248.76 ಗ್ರಾಂ ಚಿನ್ನಾಭರಣ ಮತ್ತು ಚಿನ್ನದ ಗಟ್ಟಿಗಳನ್ನು ವಶಪಡಿಸಿಕೊಂಡಿದ್ದಾರೆ.

ಶಿರ್ವ ಪೊಲೀಸ್‌ ಠಾಣಾ ವ್ಯಾಪ್ತಿಯ ಮಟ್ಟಾರು ಬಬ್ಬರ್ಯ ದೈವಸ್ಥಾನದ ಬಳಿಯ ನಿವಾಸಿ ಪವಿತ್ರಾ ಪೂಜಾರ್ತಿ ಅವರ ಮನೆಗೆ ಜೂ. 27ರಂದು ರಾತ್ರಿ ಮನೆಯ ಕಿಟಕಿ ಹುಕ್ಸ್ ಮುರಿದು, ಬಾಗಿಲಿನ ಚಿಲಕವನ್ನು ಹುಕ್ಸ್ ಕೋಲಿನಿಂದ ಎಳೆದು ಮನೆಯೊಳಗೆ ಪ್ರವೇಶಿಸಿದ ಕಳ್ಳರು ಸುಮಾರು 137 ಗ್ರಾಂ ತೂಕದ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಹೋಗಿದ್ದು, ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಪ್ರಕರಣದ ಆರೋಪಿ ಇತ್ತೆ ಬರ್ಪೆ ಅಬೂಬಕರ್‌ನನ್ನು ಜು. 21ರಂದು ಮೂಡುಬಿದಿರೆಯಲ್ಲಿ ವಶಕ್ಕೆ ಪಡೆದ ಶಿರ್ವ ಪೊಲೀಸರು ಆರೋಪಿಯಿಂದ ಸುಮಾರು 7.50 ಲ.ರೂ.ಮೌಲ್ಯದ 66.760 ಗ್ರಾಂ ಚಿನ್ನಾಭರಣ ಮತ್ತು ಕೃತ್ಯಕ್ಕೆ ಬಳಸಿದ ಸ್ಕೂಟಿಯನ್ನು ವಶಪಡಿಸಿಕೊಂಡಿದ್ದು ನ್ಯಾಯಾಂಗ ಬಂಧನ ವಿಧಿಸಲಾಗಿತ್ತು.

ಇತ್ತೆ ಬರ್ಪೆ ಅಬೂಬಕರ್‌ನನ್ನು ಪೊಲೀಸ್ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿ ಆತನು ಈ ಪ್ರಕರಣಲ್ಲಿ ಕಳವು ಮಾಡಿರುವ ಮತ್ತು ಈ ಹಿಂದೆ ಕೆಲವು ಪ್ರಕರಣಗಳಲ್ಲಿ ಕಳವು ಮಾಡಿರುವ ಚಿನ್ನಾಭರಣಗಳನ್ನು ಮಾರಾಟ ಮಾಡಲು ಉಪ್ಪಳ್ಳಿಯ ಕೆ. ಇ ಮೊಹಮ್ಮದ್ ಎಂಬಾತನಿಗೆ ನೀಡಿರುವ ಬಗ್ಗೆ ಪತ್ತೆ ಮಾಡಿದ್ದರು. ಆರೋಪಿ ಕೆ .ಇ. ಮೊಹಮ್ಮದ್‌ನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿ ಉಡುಪಿ ಜಿಲ್ಲೆಯ ಶಿರ್ವ, ಪಡುಬಿದ್ರಿ ಹಾಗೂ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣಗಳಿಗೆ ಸಂಬಂಧಿಸಿದ 182 ಗ್ರಾಂ ತೂಕದ ಚಿನ್ನದ ಗಟ್ಟಿಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ಅವರ ಆದೇಶದಂತೆ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ ಎಸ್. ನಾಯ್ಕ, ಕಾರ್ಕಳ ಸಹಾಯಕ ಪೊಲೀಸ್ ಅಧೀಕ್ಷಕಿ ಡಾ | ಹರ್ಷ ಪ್ರಿಯಂವದಾ ಅವರ ಮಾರ್ಗದರ್ಶನದಲ್ಲಿ, ತನಿಖಾಧಿಕಾರಿ ಕಾಪು ವೃತ್ತ ನಿರೀಕ್ಷಕಿ ಜಯಶ್ರೀ ಎಸ್. ಮಾನೆ ಅವರ ನೇತೃತ್ವದ ಶಿರ್ವ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿ ಬಂಧಿಸಿದ್ದ ಕುಖ್ಯಾತ ಅಂತ‌ರ್ ಜಿಲ್ಲಾ ಕಳ್ಳ ಇತ್ತೆ ಬರ್ಪೆ ಅಬೂಬಕ್ಕ‌ರ್ ಮತ್ತು ಆರೋಪಿ ಕೆ .ಇ. ಮೊಹಮ್ಮದ್ ಅವನಿಂದ ರೂ. 22,32,000/-ಮೌಲ್ಯದ ಒಟ್ಟು 248.760 ಗ್ರಾಂ ತೂಕದ ಚಿನ್ನಾಭರಣ ಮತ್ತು ಚಿನ್ನದ ಗಟ್ಟಿಗಳನ್ನು ವಶಪಡಿಸಿಕೊಂಡಿದ್ದಾರೆ.