


ಡೈಲಿ ವಾರ್ತೆ: 16/ಆಗಸ್ಟ್/ 2025


ಅಪಪ್ರಚಾರ ಖಂಡಿಸಿ ಎಸ್.ಆರ್.ವಿಶ್ವನಾಥ್ ನೇತೃತ್ವದಲ್ಲಿ ಧರ್ಮಸ್ಥಳ ಚಲೋಗೆ ಚಾಲನೆ

ನೆಲಮಂಗಲ: ಧರ್ಮಸ್ಥಳ ಕ್ಷೇತ್ರದ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿರುವುದನ್ನು ಖಂಡಿಸಿ ರಾಜ್ಯ ಬಿಜೆಪಿ ವತಿಯಿಂದ ಇಂದು ನೆಲಮಂಗಲ ಟೋಲ್ ಬಳಿ ಧರ್ಮಸ್ಥಳ ಚಲೋಗೆ ಚಾಲನೆ ನೀಡಲಾಗಿದೆ.
ಶಾಸಕ ಎಸ್.ಆರ್. ವಿಶ್ವನಾಥ್ ಅವರ ನೇತೃತ್ವದಲ್ಲಿ ಸುಮಾರು 300 ಕ್ಕೂ ಹೆಚ್ಚು ಕಾರುಗಳಲ್ಲಿ ಬಿಜೆಪಿ ಕಾರ್ಯಕರ್ತರು ಧರ್ಮಸ್ಥಳಕ್ಕೆ ತೆರಳಿದರು. ಈ ಸಂದರ್ಭದಲ್ಲಿ ಹಾಲು ಪ್ರಕೋಷ್ಠದ ರಾಜ್ಯ ಸಂಚಾಲಕ ಬೇಲೂರು ರಾಘವೇಂದ್ರ ಶೆಟ್ಟಿ, ಪ್ರಮುಖರು, ಕಾರ್ಯಕರ್ತರು, ಅಭಿಮಾನಿಗಳು ಇದ್ದರು.

ಈ ಸಂದರ್ಭದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಎಸ್.ಆರ್.ವಿಶ್ವನಾಥ್ ಎಸ್ಐಟಿ ತನಿಖೆಯನ್ನು ನಾವು ಸ್ವಾಗತಿಸಿದ್ದೆವು. ಆದರೆ ಕೆಲವು ಹಿಂದೂ ವಿರೋಧಿ ಮತ್ತು ಧರ್ಮಸ್ಥಳ ವಿರೋಧಿ ಯೂಟ್ಯೂಬರ್ಗಳು ತನಿಖೆಯ ದಿಕ್ಕು ತಪ್ಪಿಸುತ್ತಿದ್ದಾರೆ. ಹಾಗಾಗಿ ನಾವು ಇದರ ವಿರುದ್ಧ ಧ್ವನಿ ಎತ್ತಿದ್ದೇವೆ. ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮತ್ತು ಮಂಜುನಾಥ ಸ್ವಾಮಿಗೆ ಕಳಂಕ ತರುವ ಹುನ್ನಾರ ನಡೆಯುತ್ತಿದೆ. ಈ ಹಿನ್ನೆಲೆ ನಾವು ಧರ್ಮಸ್ಥಳ ಚಲೋಗೆ ಕರೆ ನೀಡಿದ್ದೇವೆ. ನಮ್ಮ ನಿರೀಕ್ಷೆ ಮೀರಿ ಜನ ಬಂದಿದ್ದಾರೆ” ಎಂದು ಹೇಳಿದರು.
ಇಂದು ಸಂಜೆ ನಾವು ಧರ್ಮಸ್ಥಳಕ್ಕೆ ತಲುಪಲಿದ್ದು, ಸಂಜೆ ದೇವನ ದರ್ಶನ ಪಡೆಯಲಿದ್ದೇವೆ. ರಾತ್ರಿ ಅಲ್ಲಿಯೇ ವಾಸ್ತವ್ಯ ಮಾಡಲಿದ್ದೇವೆ. ಇಂದು ಸಂಜೆ ರಾಜ್ಯಾಧ್ಯಕ್ಷ ವಿಜಯೇಂದ್ರ, ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ಪ್ರಮುಖರು ಧರ್ಮಸ್ಥಳಕ್ಕೆ ಬರಲಿದ್ದು, ಬೆಳಗ್ಗೆ ನಾವೆಲ್ಲ ದೇವರ ದರ್ಶನ ಮಾಡಿ ಸಂಕಲ್ಪ ಮಾಡಲಿದ್ದೇವೆ” ಎಂದು ತಿಳಿಸಿದರು.