ಡೈಲಿ ವಾರ್ತೆ: 19/ಆಗಸ್ಟ್/ 2025

ಕಿವಿ ಹಣ್ಣು ತಿನ್ನುವುದರಿಂದ ಅರೋಗ್ಯಕ್ಕೆ ಪ್ರಯೋಜನಗಳು,
ಇಲ್ಲಿದೆ ಮಾಹಿತಿ

ಕಿವಿ ಹಣ್ಣಿನ ಬಗ್ಗೆ ಯಾರಿಗೆ ತಾನೇ ತಿಳಿದಿಲ್ಲ ಹೇಳಿ? ಇದು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿಯಾಗಿರುವುದರಿಂದ ಇದನ್ನು ಯಥೇಚ್ಛವಾಗಿ ಸೇವನೆ ಮಾಡಲಾಗುತ್ತದೆ. ಈ ಹಣ್ಣು ತಿನ್ನುವಾಗ ಸ್ವಲ್ಪ ಹುಳಿ ಅಂಶ ನೀಡಿದರೂ ಕೂಡ ಜನ ಇದನ್ನು ಇಷ್ಟ ಪಟ್ಟು ಕೆಲವರು ಕಷ್ಟ ಪಟ್ಟು ತಿನ್ನುತ್ತಾರೆ. ಏಕೆಂದರೆ ಇದರಲ್ಲಿ ಅಷ್ಟು ಆರೋಗ್ಯ ಪ್ರಯೋಜನಗಳಿವೆ. ಹಾಗಾಗಿ ಈ ಹಣ್ಣಿಗೆ ಮಾರುಕಟ್ಟೆಯಲ್ಲಿ ಯಾವಾಗಲೂ ಬೇಡಿಕೆ ಇದ್ದೆ ಇರುತ್ತದೆ. ಪ್ರತಿದಿನ ಒಂದು ಕಿವಿ ತಿನ್ನುವುದರಿಂದ ಶೀತ ಮತ್ತು ಜ್ವರದಂತಹ ಸಮಸ್ಯೆಗಳಿಂದ ರಕ್ಷಣೆ ಸಿಗುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಹಾಗಾದರೆ ಇದನ್ನು ಸೇವನೆ ಮಾಡುವುದರಿಂದ ಯಾವ ರೀತಿಯ ಪ್ರಯೋಜನಗಳು ಸಿಗುತ್ತವೆ? ಯಾವ ರೀತಿಯ ಆರೋಗ್ಯ ಸಮಸ್ಯೆಗೆ ಒಳ್ಳೆಯದು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಜೀರ್ಣಕ್ರಿಯೆಗೆ ಸಹಕಾರಿ:
ನಾರಿನಂಶ ಹೆಚ್ಚಾಗಿರುವ ಕಿವಿ ಹಣ್ಣು ಜೀರ್ಣಾಂಗ ವ್ಯವಸ್ಥೆಗೆ ತುಂಬಾ ಪ್ರಯೋಜನಕಾರಿಯಾಗಿದೆ. ಕಿವಿಯಲ್ಲಿರುವ ಆಕ್ಟಿನಿಡಿನ್ ಕಿಣ್ವವು ಪ್ರೋಟೀನ್‌ಗಳನ್ನು ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ. ಹಾಗಾಗಿ ಇದು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಹೃದಯದ ಆರೋಗ್ಯಕ್ಕೆ ಒಳ್ಳೆಯದು:
ಕಿವಿ ಹಣ್ಣುಗಳಲ್ಲಿ ಪೊಟ್ಯಾಸಿಯಮ್ ಮತ್ತು ಫೈಬರ್ ಅಂಶ ಸಮೃದ್ಧವಾಗಿದೆ. ಇವು ಹೃದಯದ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿಯಾಗಿದೆ. ಮಾತ್ರವಲ್ಲ ಪೊಟ್ಯಾಸಿಯಮ್ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಹಾಗಾಗಿ ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನು ಕೂಡ ಕಡಿಮೆ ಮಾಡುತ್ತದೆ. ಹೆಚ್ಚುವರಿಯಾಗಿ, ಕಿವಿ ಹಣ್ಣುಗಳಲ್ಲಿರುವ ಉತ್ಕರ್ಷಣ ನಿರೋಧಕಗಳು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಚರ್ಮದ ಆರೋಗ್ಯಕ್ಕೆ ಪ್ರಯೋಜನಕಾರಿ:
ಕಿವಿ ಹಣ್ಣಿನಲ್ಲಿ ವಿಟಮಿನ್ ಸಿ ಮತ್ತು ವಿಟಮಿನ್ ಇ ನಂತಹ ಉತ್ಕರ್ಷಣ ನಿರೋಧಕಗಳು ಅಧಿಕವಾಗಿವೆ. ಇವು ನಮ್ಮ ಚರ್ಮಕ್ಕೆ ಬಹಳ ಪ್ರಯೋಜನಕಾರಿಯಾಗಿದೆ. ಈ ಹಣ್ಣು ಚರ್ಮದಲ್ಲಿನ ಸುಕ್ಕುಗಳನ್ನು ಕಡಿಮೆ ಮಾಡಲು ಮತ್ತು ಚರ್ಮದ ಸ್ಥಿರತೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಕಿವಿ ತಿನ್ನುವುದರಿಂದ ವಯಸ್ಸಾದ ಲಕ್ಷಣಗಳು ಕಡಿಮೆಯಾಗುತ್ತವೆ.

ನಿದ್ರಾಹೀನತೆಯ ಸಮಸ್ಯೆಗೆ ಮುಕ್ತಿ:
ಕಿವಿಫ್ರೂಟ್ ಸಿರೊಟೋನಿನ್ ಅನ್ನು ಹೊಂದಿರುತ್ತದೆ. ಇದು ನಿದ್ರೆಯ ಗುಣಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಪ್ರತಿದಿನ ಮಲಗುವ ಮುನ್ನ ಕಿವಿ ಹಣ್ಣನ್ನು ತಿನ್ನುವುದರಿಂದ ನಿದ್ರೆ ಚೆನ್ನಾಗಿ ಬರುತ್ತದೆ ಎಂದು ಹೇಳಲಾಗುತ್ತದೆ. ನಿದ್ರಾಹೀನತೆಯಿಂದ ಬಳಲುತ್ತಿರುವವರು ರಾತ್ರಿ ಒಳ್ಳೆಯ ನಿದ್ರೆ ಮಾಡಲು ದಿನಕ್ಕೆ ಒಂದು ಕಿವಿ ಹಣ್ಣನ್ನು ತಿನ್ನಲು ಸೂಚಿಸಲಾಗುತ್ತದೆ.

ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು:
ಕಿವಿ ಹಣ್ಣುಗಳಲ್ಲಿ ಲುಟೀನ್ ಮತ್ತು ಜಿಯಾಕ್ಸಾಂಥಿನ್ ನಂತಹ ಉತ್ಕರ್ಷಣ ನಿರೋಧಕಗಳು ಇರುತ್ತವೆ. ಇವು ಕಣ್ಣುಗಳ ಆರೋಗ್ಯಕ್ಕೆ ಪ್ರಯೋಜನಕಾರಿ. ಈ ಹಣ್ಣುಗಳು ಕಣ್ಣುಗಳನ್ನು ಹೊಳಪು ಮತ್ತು ವಯಸ್ಸಿಗೆ ಸಂಬಂಧಿಸಿದ ಕಣ್ಣಿನ ಸಮಸ್ಯೆಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ.

Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳ ಮಾಹಿತಿಯನ್ನು ಆಧರಿಸಿದೆ. ಡೈಲಿ ವಾರ್ತೆ ನ್ಯೂಸ್ ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.