


ಡೈಲಿ ವಾರ್ತೆ: 19/ಆಗಸ್ಟ್/ 2025


ಧರ್ಮಸ್ಥಳ ಪ್ರಕರಣ: ವೀರೇಂದ್ರ ಹೆಗ್ಗಡೆ ಮೊದಲ ಪ್ರತಿಕ್ರಿಯೆ: ‘ಏನನ್ನೂ ಮುಚ್ಚಿಟ್ಟಿಲ್ಲ, ವ್ಯವಸ್ಥಿತ ಪಿತೂರಿ ನಡೆಸುತ್ತಿದ್ದಾರೆ’

ಮಂಗಳೂರು: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀಕ್ಷೇತ್ರದ ಧರ್ಮಾಧಿಕಾರಿ, ರಾಜ್ಯಸಭಾ ಸದಸ್ಯ ಡಿ. ವೀರೇಂದ್ರ ಹೆಗ್ಗಡೆ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ” ಧರ್ಮಸ್ಥಳದ ಬಗ್ಗೆ ಗೊಂದಲ ಮೂಡಿಸುತ್ತಿದ್ದಾರೆ. ಎಸ್‌ಐಟಿ ತನಿಖೆಗೆ ನಮ್ಮ ಸಂಪೂರ್ಣ ಬೆಂಬಲ ಇದ್ದು, ಸತ್ಯ ಹೊರ ಬರಲಿದೆ ಎಂಬ ವಿಶ್ವಾಸ ಇದೆ ” ಎಂದು ಧರ್ಮಾಧಿಕಾರಿಗಳು ಹೇಳಿದ್ದಾರೆ.
ಈ ಬಗ್ಗೆ ಪಿಟಿಐಗೆ ವಿಡಿಯೋ ಸಂದರ್ಶನ ನೀಡಿರುವ ಅವರು, ಸೌಜನ್ಯ ಕೇಸ್‌ನಲ್ಲಿ ನಾನು ಸರ್ಕಾರಕ್ಕೆ ಮಾಹಿತಿ ನೀಡಿ, ತಕ್ಷಣವೇ ಅಪರಾಧಿಯನ್ನು ಪತ್ತೆಹಚ್ಚುವಂತೆ ಮಾಡಿದೆ. ಪೊಲೀಸರಿಗೆ ಮಾಹಿತಿ ನೀಡುವುದನ್ನು ಬಿಟ್ಟು ನಮಗೆ ಬೇರೆ ಯಾವುದೇ ವಿಚಾರ ನಮಗೆ ಸಂಬಂಧವಿಲ್ಲ. ಘಟನೆ ನಡೆದಾಗ ನಮ್ಮ ಕುಟುಂಬದ ಸದಸ್ಯರು ದೇಶದಲ್ಲೇ ಇರಲಿಲ್ಲ. ಅವರು ಶಿಕ್ಷಣಕ್ಕಾಗಿ ವಿದೇಶದಲ್ಲಿದ್ದರು. ಆದರೂ, ಅವರೇ ಈ ಕೃತ್ಯ ಎಸಗಿದ್ದಾರೆ ಎಂದು ಸುಳ್ಳು ಆರೋಪಗಳನ್ನು ಹೊರಿಸಲಾಯಿತು. ನಮ್ಮನ್ನು ಅನಾವಶ್ಯಕವಾಗಿ ಈ ಪ್ರಕರಣದಲ್ಲಿ ಎಳೆದು ತರಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ತನಿಖೆಗೆ ಸಂಪೂರ್ಣ ಸಹಕಾರ ಎಂದ ವೀರೇಂದ್ರ ಹೆಗ್ಗಡೆ
“ನಾವು ಯಾವುದೇ ರೀತಿಯ ತನಿಖೆಗೆ ಸಂಪೂರ್ಣ ಸಹಕಾರ ನೀಡಲು ಸಿದ್ಧರಿದ್ದೇವೆ. ನಾವು ಏನನ್ನೂ ಮುಚ್ಚಿಟ್ಟಿಲ್ಲ. ಯಾವುದೇ ತನಿಖೆಯನ್ನು ನಾವು ಸ್ವಾಗತಿಸುತ್ತೇವೆ. ಎಸ್‌ಐಟಿ ತನಿಖೆಯ ಅಂತಿಮ ವರದಿಗಾಗಿ ನಾವು ಕಾಯುತ್ತಿದ್ದೇವೆ,” ಎಂದು ಅವರು ತಿಳಿಸಿದರು.
ಸಾಮಾಜಿಕ ಮಾಧ್ಯಮಗಳಲ್ಲಿ ನಡೆಯುತ್ತಿರುವ ಅಪಪ್ರಚಾರದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ಹೆಗ್ಗಡೆಯವರು, “ಕೆಲವರು ಸಾಮಾಜಿಕ ಮಾಧ್ಯಮಗಳನ್ನು ಬಳಸಿಕೊಂಡು ಯುವಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ಯುವಕರನ್ನು ದೇವಸ್ಥಾನ ಮತ್ತು ಧಾರ್ಮಿಕ ನಂಬಿಕೆಗಳಿಂದ ದೂರ ಮಾಡುವ ವ್ಯವಸ್ಥಿತ ಪಿತೂರಿ ನಡೆಯುತ್ತಿದೆ. ಇಂತಹ ಸುಳ್ಳು ಸಂದೇಶಗಳಿಂದ ಯುವಕರ ಮನಸ್ಸನ್ನು ಕಲುಷಿತಗೊಳಿಸಲಾಗುತ್ತಿದೆ, ಇದು ಅತ್ಯಂತ ಖೇದಕರ,” ಎಂದರು.
ರಾಜ್ಯಾದ್ಯಂತ ನಾವು ಬರ್ತೇವೆ ಎಂದು ಕರೆ ಬರ್ತಿದೆ
ಎಸ್‌ಐಟಿ ಮಾಡಿದ್ದು, ನಮಗೆ ನಿರಾಳವಾಗಿದೆ. ಎಲ್ಲಾ ಸತ್ಯ ಹೊರಬರಲಿದೆ. ಯಾವುದೂ ಮುಚ್ಚಿಡುವುದಿಲ್ಲ. ಇಡೀ ರಾಜ್ಯದಿಂದ ನನಗೆ ಬೇಡಿಕೆ ಕರೆ ಬರುತ್ತಿದೆ. 500 ಕಾರಿನಲ್ಲಿ, ಬಸ್‌ನಲ್ಲಿ ಬರ್ತೇವೆ. 1000 ಜನ ಬರ್ತೇವೆ ಎಂದು ಹೇಳುತ್ತಿದ್ದಾರೆ. ನಾನು ಬೇಡ ಎಂದು ಹೇಳುತ್ತಿದ್ದೇನೆ. ಪ್ರಕರಣದ ಸತ್ಯಾಂಶ ಶೀಘ್ರದಲ್ಲೇ ಹೊರಬರಲಿದ್ದು, ನಿಜವಾದ ಅಪರಾಧಿಗಳಿಗೆ ಶಿಕ್ಷೆಯಾಗಲಿದೆ ಎಂಬ ವಿಶ್ವಾಸವನ್ನು ಧರ್ಮಾಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದರು.