ಡೈಲಿ ವಾರ್ತೆ: 20/ಆಗಸ್ಟ್/ 2025

ಬೆಂಗಳೂರಿನಲ್ಲಿ 5 ಕೋಟಿ ರೂ ಡ್ರಗ್ಸ್ ಸೀಜ್: ಆಫ್ರಿಕಾ ಮೂಲದ ಇಬ್ಬರ ಬಂಧನ

ಬೆಂಗಳೂರು: ನಗರದಲ್ಲಿ ಡ್ರಗ್ಸ್ ಮಾರಾಟ ಎಗ್ಗಿಲ್ಲದೇ ಸಾಗುತ್ತಿದೆ. ಖಾಕಿ ಪಡೆ ಎಷ್ಟೇ ಕಣ್ಣಿಟ್ಟರು ಡ್ರಗ್ಸ್ ಪೆಡ್ಲರ್​ಗಳ ಆಟ ಮುಂದುವರಿದಿದೆ. ಅದರಲ್ಲೂ ವಿದೇಶಿಗರ ಹಾವಳಿ ಮಿತಿಮೀರಿದ್ದು, ವೀಸಾ ಅವಧಿ ಮುಗಿದಿದರೂ ಬೆಂಗಳೂರಲ್ಲಿ ವಾಸಿಸುತ್ತಿದ್ದಾರೆ. ಇದೀಗ ಪೊಲೀಸರು ಒಂದಷ್ಟು ಪೆಡ್ಲರ್​ಗಳ ಹೆಡೆಮುರಿ ಕಟ್ಟಿದ್ದಾರೆ. ಜೊತೆಗೆ ಒಂದಲ್ಲ ಎರಡಲ್ಲ ಬರೋಬ್ಬರಿ ಐದು ಕೋಟಿ ರೂ. ಡ್ರಗ್ಸ್ ಸೀಜ್ ಮಾಡಿದ್ದಾರೆ.

ಆಫ್ರಿಕಾ ಮೂಲದ ಜೊಯಲ್ ಕಾಬೊಂಗ್, ಜೊಯ್ ಸಂಡೇ ಬಂಧಿತ ಪ್ರಜೆಗಳು. ಜೊಯಲ್ ಕಾಬೊಂಗ್​ 12 ವರ್ಷಗಳ ಹಿಂದೆ ವಿದ್ಯಾರ್ಥಿ ವೀಸಾದಡಿ ಭಾರತಕ್ಕೆ ಬಂದಿದ್ದ. ಅದೇ ರೀತಿಯಾಗಿ ಜೊಯ್ ಸಂಡೇ ಸಹ ಮೂರ ವರ್ಷಗಳ ಹಿಂದೆ ಭಾರತಕ್ಕೆ ಬಂದಿದ್ದಳು. ವೀಸಾ ಅವಧಿ ಮುಗಿದಿದರೂ ಬೆಂಗಳೂರಲ್ಲಿ ವಾಸವಾಗಿದ್ದರು. ಈ ಇಬ್ಬರು ಮತ್ತೊಬ್ಬನಿಂದ ಡ್ರಗ್ಸ್ ಖರೀದಿ ಮಾಡಿ ಮಾರಾಟ ಮಾಡುತ್ತಿದ್ದರು. ಆದರೆ ಆ.15ರ ಸಂಜೆ ಬೆಟ್ಟದಾಮಸಪುರದಲ್ಲಿ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಸದ್ಯ ಬಂಧಿತರಿಂದ 2.150 ಕೆಜಿ ಎಂಡಿಎಂಎ ವಶಕ್ಕೆ ಪಡೆದು ಬಂಧಿಸಲಾಗಿದೆ ಎಂದು ಪೊಲೀಸ್ ಆಯುಕ್ತರು ಸೀಮಂತ್ ಕುಮಾರ್ ಸಿಂಗ್​ ಹೇಳಿದ್ದಾರೆ.