


ಡೈಲಿ ವಾರ್ತೆ: 06/ಸೆ./20


ಷೇರು ವಹಿವಾಟಿನ ಹೆಸರಿನಲ್ಲಿ 75 ಲಕ್ಷ ರೂ. ವಂಚನೆ: ಉಡುಪಿ ಪೊಲೀಸರಿಂದ ಕಾರ್ಯಾಚರಣೆ, ನಾಲ್ವರ ಬಂಧನ

ಉಡುಪಿ: ಷೇರು ಟ್ರೇಡಿಂಗ್ ಹೆಸರಿನಲ್ಲಿ ಹೆಚ್ಚಿನ
ಲಾಭಾಂಶದ ಆಮಿಷ ತೋರಿಸಿ ಮಹಿಳೆಯೊಬ್ಬರಿಂದ 75 ಲಕ್ಷ ರೂ. ಹೂಡಿಕೆ ಮಾಡಿಸಿ ವಂಚಿಸಿರುವ ಪ್ರಕರಣವನ್ನು ಭೇದಿಸಿರುವ ಉಡುಪಿ ಪೊಲೀಸರು, ವಂಚನೆಗೆ ಬ್ಯಾಂಕ್ ಖಾತೆ ಬಳಸಿದ ಆರೋಪದಲ್ಲಿ ಮಂಗಳೂರು ಆಸುಪಾಸಿನ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಸುರತ್ಕಲ್ ಕೋಡಿಕೆರೆ ಪ್ರೇಮ್ ನಗರ ನಿವಾಸಿ ಮೊಹಮದ್ ಕೈಸ್ (20), ಹೆಜಮಾಡಿ ಕನ್ನಂಗಾರು ನಿವಾಸಿ ಅಹಮದ್ ಅನ್ವಿಜ್ (20), ಬಂಟ್ವಾಳ ತಾಲೂಕು ‘ಬಿ’ ಮೂಡ ಗ್ರಾಮದ ಜೋಡುಮಾರ್ಗ ನಿವಾಸಿಗಳಾದ ಸಮ್ಯಾನ್ (30) ಮತ್ತು ತಾಸೀರ್ (31) ಬಂಧಿತ ಆರೋಪಿಗಳು.
2025ರ ಫೆಬ್ರವರಿಯಲ್ಲಿ ಕಾಪು ತಾಲೂಕು ಶಂಕರಪುರ ನಿವಾಸಿ ಜೊಸ್ಸಿ ರವೀಂದ್ರ ಡಿಕ್ರೂಸ್ (54) ಎಂಬವರಿಗೆ ಫೇಸ್ಬುಕ್ ಮೂಲಕ ಪರಿಚಯವಾಗಿದ್ದ ಅಗರವಾಲ್ ಹೆಸರಿನ ಮಹಿಳೆಯೊಬ್ಬಳು ತನ್ನ ವಾಟ್ಸಪ್ ನಂಬರ್‌ನಿಂದ ಮೆಸೇಜ್ ಮಾಡಿ ಎಫ್‌ಎಕ್ಸ್ ಸಿಎಂ ಗೋಲ್ಡ್ ಟ್ರೇಡಿಂಗ್ ನಲ್ಲಿ ಹಣ ಹೊಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ಬರುತ್ತದೆ ಎಂದು ನಂಬಿಸಿದ್ದಳು. ಅದರಂತೆ, ಜೊಸ್ಸಿಯವರು ತನ್ನ ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ ಒಟ್ಟು 75 ಲಕ್ಷ ರೂಪಾಯಿ ಹಣವನ್ನು ಟ್ರೇಡಿಂಗ್ ಹೆಸರಲ್ಲಿ ವರ್ಗಾವಣೆ ಮಾಡಿದ್ದರು.
ಆದರೆ ಹೂಡಿಕೆ ಮಾಡಿಸಿಕೊಂಡ ಮಹಿಳೆ ಬಳಿಕ ಸಂಪರ್ಕಕ್ಕೆ ಸಿಗದ ಹಿನ್ನೆಲೆಯಲ್ಲಿ ಜೊಸ್ಸಿ ಡಿಕ್ರೂಸ್ ಅವರು ಉಡುಪಿ ಸೆನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಪ್ರಕರಣ ದಾಖಲಿಸಿದ್ದ ಪೊಲೀಸರು ಬ್ಯಾಂಕ್ ಖಾತೆಗಳನ್ನು ಆಧರಿಸಿ ತನಿಖೆ ಕೈಗೊಂಡು ಸುರತ್ಕಲ್, ಹೆಜಮಾಡಿ ಪರಿಸರದ ನಾಲ್ವರನ್ನು ಬಂಧಿಸಿದ್ದಾರೆ. ನಾಲ್ವರ ಖಾತೆಗಳಿಗೆ ಹಣ ರವಾನೆಯಾಗಿರುವುದು ತನಿಖೆಯಲ್ಲಿ ಪತ್ತೆಯಾಗಿದ್ದು ಇವರು ತಮ್ಮ ಖಾತೆಗಳಿಗೆ ಬಂದ ಹಣವನ್ನು ನಗದೀಕರಿಸಿ ಸೈಬರ್ ವಂಚಕರಿಗೆ ನಗದು ರೂಪದಲ್ಲಿ ನೀಡಿದ್ದಾಗಿ ತಿಳಿಸಿದ್ದಾರೆ. ಸದ್ಯಕ್ಕೆ ನಾಲ್ವರನ್ನು ಬಂಧಿಸಿದ್ದು ಇವರಿಗೂ ವಂಚಕರಿಗೂ ಹೇಗೆ ಸಂಬಂಧ, ಇವರು ಕಮಿಷನ್ ಪಡೆದು ಹಣ ನೀಡಿದ್ದು ಹೌದೇ ಅಥವಾ ಇವರೇ ಸೈಬರ್ ವಂಚನೆ ಮಾಡುತ್ತಿದ್ದಾರೆಯೇ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.