ಡೈಲಿ ವಾರ್ತೆ: 09/ಸೆ./2025

26 ವರ್ಷಗಳ ಹಿಂದಿನ ಮುಲ್ಕಿ ಕೋಮುಗಲಭೆ ಪ್ರಕರಣ: ಹಳೆ ಆರೋಪಿಗಳ ಇಬ್ಬರ ಬಂಧನ!

ಮಂಗಳೂರು: ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಹಳೆಯಂಗಡಿಯಲ್ಲಿ 1998ರ ಡಿ. 31ರಂದು ನಡೆದಿದ್ದ ಕೋಮು ಗಲಭೆ, ಬೆಂಕಿ ಹಚ್ಚಿ ಗಲಾಟೆ ಪ್ರಕರಣದಲ್ಲಿ ಭಾಗಿಗಳಾಗಿ 26 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಇಬ್ಬರನ್ನು ಮುಲ್ಕಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಮುಲ್ಕಿ ತಾಲೂಕಿನ ಕೆಮ್ರಾಲ್ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಪಕ್ಷಿಕೆರೆ ನಿವಾಸಿ ಲೀಲಾಧರ್ ( 52) ಮತ್ತು ಹಳೆಯಂಗಡಿ ಪಡುಪಣಂಬೂರು ನಿವಾಸಿ ಚಂದ್ರಹಾಸ್ ಕೇಶವ ಶೆಟ್ಟಿ ( 59) ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

1998ರಂದು ಮುಲ್ಕಿ ಠಾಣಾ ವ್ಯಾಪ್ತಿಯ ಹಳೆಯಂಗಡಿಯಲ್ಲಿ ನಡೆದ ಕೋಮು ಗಲಭೆ, ಬೆಂಕಿ ಹಚ್ಚಿ ನಡೆಸಿದ ಗಲಾಟೆ ನಡೆದಿತ್ತು. ಬಳಿಕ ಆರೋಪಿಗಳ ಪೈಕಿ ಲೀಲಾಧರ್ ಮತ್ತು ಚಂದ್ರಹಾಸ್‌ ಕೇಶವ ಶೆಟ್ಟಿ ಅವರು ಘಟನೆ ನಡೆದಾಗಿನಿಂದ ಪೊಲೀಸರಿಗೆ ಸಿಗದೇ ಪರಾರಿಯಾಗಿದ್ದರು.
ಈ ಸಂಬಂಧ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಲೀಲಾಧರ್ ನನ್ನು ಕೆಮ್ರಾಲ್ ಪಂಚಾಯತ್ ವ್ಯಾಪ್ತಿಯ ಬಾಡಿಗೆ ಮನೆಯೊಂದರಲ್ಲಿ ವಾಸವಿರುವ ಮಾಹಿತಿ ಕಲೆ ಹಾಕಿ ಬಂಧಿಸಿದ ಪೊಲೀಸರು, ಚಂದ್ರಹಾಸ್‌ ಕೇಶವ ಶೆಟ್ಟಿ ವಿದೇಶದಿಂದ ಮುಂಬೈ ವಿಮಾನ ನಿಲ್ದಾಣಕ್ಕೆ ಬಂದು ಇಳಿದಾಗ ಅಲ್ಲಿ ಆತನನ್ನು ವಶಕ್ಕೆ ಪಡೆದು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.