ಡೈಲಿ ವಾರ್ತೆ: 09/ಸೆ./2025

ಧರ್ಮಸ್ಥಳದ ಬುರುಡೆ ಪ್ರಕರಣ: ಸೌಜನ್ಯಾ ಮೇಲೆ ಅತ್ಯಾಚಾರವೆಸಗಿ ಕೊಂದಿದ್ದೇ ವಿಠ್ಠಲ ಗೌಡ – ಎಲ್ಲ ಸಾಕ್ಷ್ಯ ಎಸ್ಪಿಗೆ ಕೊಡುತ್ತೇನೆಂದ ಸ್ನೇಹಮಯಿ ಕೃಷ್ಣ!

ಮಂಗಳೂರು: ಧರ್ಮಸ್ಥಳದ ಬುರುಡೆ ಪ್ರಕರಣ ಹೊಸ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಮಾಸ್ಕ್‌ಮ್ಯಾನ್‌ ಚಿನ್ನಯ್ಯಗೆ ಬುರುಡೆ ತಂದುಕೊಟ್ಟಿದ್ದು ಸೌಜನ್ಯಾಳ ಮಾವ ವಿಠ್ಠಲ ಗೌಡ ಎಂದಿ ಗಿರೀಶ್ ಮಟ್ಟಣ್ಣನವರ್ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದರು. ಧರ್ಮಸ್ಥಳದ ಬಂಗ್ಲೆಗುಡ್ಡ ಕಾಡಿನಿಂದ ರಾತ್ರಿವೇಳೆ ಈ ತಲೆಬುರುಡೆಯನ್ನು ತರಲಾಗಿತ್ತು ಎಂಬ ಬೆಚ್ಚಿಬೀಳಿಸುವ ಮಾಹಿತಿಯನ್ನು ಎಸ್‌ಐಟಿ ಮುಂದೆ ಹೇಳಿದ್ದರು. ಆದರೆ ಈಗ ಸೌಜನ್ಯಳ ಮಾವ ವಿಠ್ಠಲ ಗೌಡ ವಿರುದ್ಧ ಗಂಭೀರ ಆರೋಪವೊಂದು ಕೇಳಿಬಂದಿದೆ.

ಮಹೇಶ್ ಶೆಟ್ಟಿ ತಿಮರೋಡಿ, ಮಟ್ಟಣ್ಣ, ಸುಜಾತ್‌ ಭಟ್‌, ಸಮೀರ್‌ನಿಂದ ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಆಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಕೆಲವು ದಿನಗಳ ಹಿಂದೆ ದೂರು ನೀಡಿದ್ದರು. ಹೀಗಾಗಿ ಎಸ್‌ಐಟಿ ಸ್ನೇಹಮಯಿಗೂ ಬುಲಾವ್‌ ಕೊಟ್ಟು ಸೋಮವಾರ ವಿಚಾರಣೆ ನಡೆಸಿದೆ. ಬಳಿಕ ಮಾತನಾಡಿರುವ ಸ್ನೇಹಿಮಯಿ ಕೃಷ್ಣ ಹೊಸ ಬಾಂಬ್‌ ಸಿಡಿಸಿದ್ದಾರೆ. ಸೌಜನ್ಯಳ ಮೇಲೆ ಅತ್ಯಾಚಾರವೆಸಗಿ ಕೊಂದಿರುವುದು ಬೇರೆ ಯಾರೂ ಅಲ್ಲ, ಆಕೆಯ ಮಾವ ವಿಠ್ಠಲ ಗೌಡ ಎಂದು ಆರೋಪಿಸಿದ್ದಾರೆ.

ಸದ್ಯ ಹೀಗೆ ಆರೋಪಿಸಿರುವ ಸ್ನೇಹಮಯಿ ಕೃಷ್ಣ ತಮ್ಮ ಬಳಿರುವ ಮಾಹಿತಿ, ಸಾಕ್ಷ್ಯ ಸಮೇತ ಎಸ್​ಪಿಗೆ ದೂರು ಕೊಡಲು ನಿರ್ಧರಿಸಿದ್ದು, ಸೌಜನ್ಯ ಸಾವಿನ ಪ್ರಕರಣದ ಮರು ತನಿಖೆಯೂ ಆಗಬೇಕು ಎಂದಿದ್ದಾರೆ.

ಮಟ್ಟಣ್ಣನವರ್, ಜಯಂತ್‌, ವಿಠ್ಠಲಗೌಡನವಿಗೆ ಎಸ್‌ಐಟಿ ವಿಚಾರಣೆ ಬಿಸಿ:
ಬುರುಡೆ ಸಂಚಿನ ಮಾಸ್ಟರ್‌ ಮೈಂಡ್ ಗಿರೀಶ್‌ ಮಟ್ಟಣ್ಣನವರ್‌ಗೆ ನಾಲ್ಕನೇ ದಿನವಾದ ಸೋಮವಾರವೂ ವಿಚಾರಣೆ ಬಿಸಿ ತಟ್ಟಿತು. ಸೌಜನ್ಯಳ ಮಾವ ವಿಠ್ಠಲ ಗೌಡನಿಗೂ ಫುಲ್‌ಗ್ರಿಲ್ ಮಾಡಲಾಗಿದೆ. ಇನ್ನು ಟಿ .ಜಯಂತ್ ಮಾಸ್ಕ್‌ ಹಾಕಿಕೊಂಡು ವಿಚಾರಣೆಗೆ ಹಾಜರಾಗಿದ್ದ. ಕಾಡಿನಿಂದ ತಲೆಬುರುಡೆ ತಂದ ಸಂಬಂಧವೇ ಮೂವರನ್ನೂ ವಿಚಾರಣೆ ನಡೆಸಲಾಗಿದೆ.

ಅಸ್ಥಿಪಂಜರ ಅಲ್ಲೇ ಹೂತು ಬುರುಡೆ ತಂದ ವಿಠ್ಠಲ ಗೌಡ:
ಬಂಗ್ಲೆಗುಡ್ಡ ಕಾಡಿನಿಂದ ವಿಠ್ಠಲಗೌಡನೇ ಬುರುಡೆ ತಂದಿದ್ದು ಎಂಬುದು ಕೂಡ ಸೋಮವಾರ ಬಯಲಾಗಿತ್ತು. ಕಾಡಿನಿಂದ ಬುರುಡೆ ತಂದಿದ್ದ ವಿಠ್ಠಲ ಗೌಡ, ಉಳಿದ ಅಸ್ಥಿಪಂಜರವನ್ನು ಅಲ್ಲೇ ಹೂತು ಹಾಕಿ ಬಂದಿರುವುದು ಗೊತ್ತಾಗಿದೆ. ಹೀಗಾಗಿ ಅದನ್ನೂ ಪತ್ತೆ ಹಚ್ಚಲು ಎಸ್‌ಐಟಿ ಮುಂದಾಗಿದ್ದು, ಬಂಗ್ಲೆಗುಡ್ಡದಲ್ಲಿ ಹೆಚ್ಚಿನ ಭದ್ರತೆ ಕಲ್ಪಿಸಲಾಗಿದೆ.