



ಡೈಲಿ ವಾರ್ತೆ: 10/ಸೆ./2025

ಕಾರ್ಕಳ: ಅಡಿಕೆ ಕಳವು ಪ್ರಕರಣ – ಆರೋಪಿಗಳು 12 ಮಂದಿ ಅಪ್ರಾಪ್ತ ವಿದ್ಯಾರ್ಥಿಗಳ ಬಂಧನ

ಕಾರ್ಕಳ: ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಮುಂಡೂರು ತೋಟದ ಮನೆಯಲ್ಲಿ ಆ. 23ರಂದು ನಡೆದ ಅಡಕೆ ಕಳವು ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ.
ತಾಂತ್ರಿಕ ಆಯಾಮದಲ್ಲಿ ತನಿಖೆ ಕೈಗೊಂಡ ಪೊಲೀಸರು ಆರೋಪಿಗಳನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಎಲ್ಲಾ 12 ಮಂದಿ ಆರೋಪಿಗಳು ಅಪ್ರಾಪ್ತ ವಯಸ್ಕರಾಗಿದ್ದು, ಬೇರೆ ಬೇರೆ ಕಾಲೇಜಿನ ವಿದ್ಯಾರ್ಥಿಗಳಾಗಿದ್ದಾರೆ.
ವಿಚಾರಣೆ ವೇಳೆ ಬಟ್ಟೆ ಖರೀದಿ ಸೇರಿ ಇನ್ನಿತರೆ ಮೋಜು ಮಾಡಲು ಕೃತ್ಯ ಎಸಗಿರುವುದಾಗಿ ತಪ್ರೊಪ್ಪಿಕೊಂಡಿದ್ದಾರೆ.
12 ಮಂದಿಯನ್ನು ಬಂಧಿಸಿ, 5 ಲಕ್ಷ ರೂ. ಮೌಲ್ಯದ 1100 ಕೆಜಿ ಅಡಿಕೆ ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ಪೊಲೀಸರು ಬಾಲ ನ್ಯಾಯ ಮಂಡಳಿಗೆ ಹಾಜರುಪಡಿಸಿದ್ದಾರೆ.
ಈ ಕಾರ್ಯಾಚರಣೆ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಹರಿ ರಾಮ್ ಶಂಕರ್ ಮಾರ್ಗದರ್ಶನದಲ್ಲಿ ನಿರೀಕ್ಷಕ ಮಂಜಪ್ಪ ಅವರ ನೇತೃತ್ವದಲ್ಲಿ, ಕಾರ್ಕಳ ಗ್ರಾಮಾಂತರ ಠಾಣೆಯ ಪಿಎಸ್‌ಐಗಳಾದ ಪ್ರಸನ್ನ ಎಂ.ಎಸ್., ಸುಂದರ, ಎಎಸ್‌ಐಗಳಾದ ಪ್ರಕಾಶ್, ಸುಂದರ ಗೌಡ, ಸಿಬ್ಬಂದಿ ರುದ್ರೇಶ್, ಚಂದ್ರಶೇಖರ, ಮಹಂತೇಶ್, ಜಿಲ್ಲಾ ಪೊಲೀಸ್ ಕಚೇರಿಯ ಸಿಡಿಆರ್ ಸಿಬ್ಬಂದಿ ದಿನೇಶ್, ನಿತಿನ್ ಅವರ ತಂಡವು ಕಾರ್ಯಾಚರಣೆ ನಡೆಸಿದ್ದಾರೆ.
