


ಡೈಲಿ ವಾರ್ತೆ: 14/ಸೆ./2025


ಹಿಂದೂ ಧರ್ಮ ರಕ್ಷಕ ಕಾಮುಕರಿಂದ “ಹೆಣ್ಣೋ ರಕ್ಷತಿ ರಕ್ಷಿತಹ” ಅಭಿಯಾನ ನಡೆಯ ಬೇಕಿದೆ- ನಾಗೇಂದ್ರ ಪುತ್ರನ್

ಇತ್ತೀಚಿಗೆ ಅಮಾಸೆಬೈಲ್ ನಲ್ಲಿ ಧರ್ಮ ಸಂರಕ್ಷಣೆ ಜಾಥಾಗೆ ಮನೆಗೆ ಆಮಂತ್ರಣ ಪತ್ರಿಕೆ ಕೊಡಲು ಬಂದ ಮಹಿಳೆಯ ಮೇಲೆ ಲೈಂಗಿಕವಾಗಿ ಮುಗಿ ಬಿದ್ದು ದೂರು ದಾಖಲಾಗುತ್ತಿದ್ದಂತೆ ತಲೆ ಮರೆಸಿಕೊಂಡಿರುವ ಹಿಂದೂ ಧರ್ಮ ರಕ್ಷಕ ನವೀನ್ ಚಂದ್ರ ಶೆಟ್ಟಿಯ ಬಂಧಿಸಲು ಸಾಧ್ಯವಾಗದಿರುವ ಬಗ್ಗೆ ಜಿಲ್ಲಾ ಕಾಂಗ್ರೇಸ್ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ನಾಗೇಂದ್ರ ಪುತ್ರನ್ ಆಕ್ರೋಶ ವ್ಯಕ್ತಪಡಿಸಿ ಪತ್ರಿಕಾ ಹೇಳಿಕೆ ನೀಡಿದ್ದಾರೆ.

ಅನ್ಯರಿಂದ ಹಿಂದೂ ಹುಡುಗಿಯರಿಗೆ ಅನ್ಯಾಯವಾದಾಗ ಉಟ್ಟ ಪಂಚೆಯಲ್ಲಿಯೇ ತಡಬಡಿಸಿ ಎದ್ದು ಬಂದು ಹೆಣ್ಣುಗಳ ರಕ್ಷಣೆಯ ಬಗ್ಗೆ ಉದ್ದುದ್ದ ಭಾಷಣ ಬಿಗಿಯುವ ಈ ಸ್ವಯಂ ಘೋಷಿತ ಧರ್ಮ ರಕ್ಷಕರು ಅವಕಾಶ ಸಿಕ್ಕಿದಾಗ ಒಂಟಿ ಸ್ವಧರ್ಮಿಯ ಹಿಂದೂ ಯುವತಿಯ ಮೇಲೆ ಉಟ್ಟ ಪಂಚೆಯನ್ನು ಸಡಿಲ ಗೊಳಿಸಿ ತೆವಲಿಗೆ ಬೀಳುವ ಕಾಮಂಧರ ಬಗ್ಗೆ ಊರು, ಕೇರಿಗಳಲ್ಲಿ ಧರ್ಮ ಸಂರಕ್ಷಣೆಯ ಡಂಗುರ ಸಾರಿಸುವ ಧರ್ಮ ರಕ್ಷಕ ಪಕ್ಷದ ಕೋಮು ಸರ್ಪಗಳು ಸೊಲ್ಲೆತ್ತುವುದಿಲ್ಲ ಏಕೆ?
ಧರ್ಮ ರಕ್ಷಕಿಯನ್ನು ಹಾಡುಹಗಲೇ ಮುಕ್ಕಲು ಹೊರಟ ಕಾಮ ಕೀಚಕನನ್ನು ಬಂಧಿಸಲು ಇನ್ನು ಎಷ್ಟು ದಿನ ಬೇಕು ಎಂದು ಅಮಾಸೆಬೈಲ್ ಠಾಣಾ ಪಿಎಸ್ಐ ಅವರನ್ನು ನಾಗೇಂದ್ರ ಪುತ್ರನ್ ಪ್ರಶ್ನೆ ಮಾಡಿದ್ದಾರೆ.
ಧರ್ಮ ರಕ್ಷಣೆ ಹೆಸರಿನಲ್ಲಿ ಇಂತಹ ಕಾಮಂದರು ಎಷ್ಟೋ ಹೆಣ್ಣು ಮಕ್ಕಳನ್ನು ಅಡ್ಡಡ್ಡ ನುಂಗಿ ಹಾಕಿದ್ದಾರೆ.
ಯಾವುದೇ ಒಬ್ಬ ನೈಜ ಧರ್ಮ ಸಂರಕ್ಷಕ ಸಮಾಜ ಸೇವೆ ಮಾಡಿಕೊಂಡು ಸಂಘ, ಸಂಸ್ಥೆಗಳಲ್ಲಿ ದುಡಿಯುತ್ತಿರುವ ಮಹಿಳೆಯರಲ್ಲಿ ಈ ರೀತಿ ಹಿಂಸ್ರ ಪಶುವಿನಂತೆ ವರ್ತಿಸುವುದಿಲ್ಲ,
ಒಂದು ರಾಷ್ಟ್ರೀಯ ಪಕ್ಷ ಬಿಜೆಪಿಯ ಸ್ಥಳೀಯ ನಾಯಕನಾಗಿ ಇಂತಹ ಹೀನ ಕೃತ್ಯವೆಸಗಿರುವ ಕಾಮಿಯನ್ನು ಕುಂದಾಪುರ ಕ್ಷೇತ್ರದ ಶಾಸಕರು ಸಂತ್ರಸ್ಥೆಗೆ ಬೆಂಬಲವಾಗಿ ನಿಂತು ಆರೋಪಿಯನ್ನು ಕೂಡಲೇ ಬಂದಿಸುವಂತೆ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರಿಗೆ ಆಗ್ರಹಿಸಿ ಪಕ್ಷಕ್ಕೆ ಅಂಟಿರುವ ಕಳಂಕವನ್ನು ಕೊಂಚ ಮಟ್ಟಿಗಾದರೂ ತೊಳೆದು ಕೊಳ್ಳಬೇಕಿತ್ತು.
ಅನ್ಯ ಧರ್ಮಿಯರಿಂದ ಹಿಂದೂ ಹುಡುಗಿಯರ ಮಾನಹರಣದ ಸುದ್ದಿ ಕೇಳಿದೊಡನೆ ಸಾಕ್ಷಾತ್ ತನ್ನ ಮನೆಯ ಹುಡುಗಿಯೇ ಬಲಿಯಾದಳೆಂದು ಧರ್ಮ, ಸಂಸ್ಕೃತಿಯ ಬಗ್ಗೆ ಮೈಲುಗಟ್ಟಲೆ ಆಕ್ರೋಷಿತ ಪ್ರವಚನ ನೀಡುವ ಉಡುಪಿ ಚಿಕ್ಕಮಂಗಳೂರಿನ ಹಾಲಿ ಸಂಸದರಿಗೆ ತನ್ನದೇ ಸಮುದಾಯದ ಮಹಿಳೆಯ ಮೇಲೆ ಈ ರೀತಿ ಅನ್ಯಾಯವಾಗಿರುವಾಗ ಸಂತ್ರಸ್ಥೆಯ ಪರವಾಗಿ ಒಂದೇ ಒಂದು ಮಾತು ಹೊರಡುವುದಿಲ್ಲ ಯಾಕೆ?
ಹಿಂದೂ ಹುಡುಗಿಯರನ್ನು ಮುಕ್ಕುವ ಕಾಮುಕ ಆರೋಪಿಗಳಿಗೆ ತಮ್ಮ ಪಕ್ಷದವರೆಂಬ ರಿಯಾಯಿತಿ ಕೂಡ ಬಿಜೆಪಿ ಪಕ್ಷದಲ್ಲಿ ಚಾಲ್ತಿಯಲ್ಲಿದೆಯಾ? ಎಂದು ಕೋಟ ಶ್ರೀನಿವಾಸ್ ಪೂಜಾರಿಯವರಿಗೆ ಟಾಂಗ್ ಕೊಟ್ಟಿರುವ ಪುತ್ರನ್ ಕಡೇ ಪಕ್ಷ ಅವರಾದರೂ ಆರೋಪಿಯ ಬಂಧನಕ್ಕೆ ಒತ್ತಡ ತರಬಹುದಿತ್ತು ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ.
ಹಿಂದೂ ಮಹಿಳೆಯರ ಮಾನ ಪ್ರಾಣವನ್ನು ರಕ್ಷಿಸುವ ನಿಟ್ಟಿನಲ್ಲಿ ದುರ್ಗವಾಹಿನಿಯಂತಹ ಕೆಚ್ಚೆದೆಯ ತಂಡಗಳು ಬಿಜೆಪಿ ಮಹಿಳಾ ಮಂಡಳಿಯಲ್ಲಿ ಜನ್ಮತಾಳಿವೆ ಆದರೆ ಈ ಮಹಿಳಾ ಘಟಕಗಳು ತಮ್ಮ ಕಣ್ಣೆದುರಿಗೆ ಒಂದು ಹಿಂದೂ ಹೆಣ್ಣಿಗೆ ಆಗಿರುವ ಅನ್ಯಾಯದ ಬಗ್ಗೆ ಯಾಕೆ ಧ್ವನಿ ಎತ್ತುವುದಿಲ್ಲ?
“ಧರ್ಮೋ ರಕ್ಷತಿ ರಕ್ಷಿತಹ “ಎಂಬ ಹಿಂದೂ ರಂಗ ಭೂಮಿಯ ನಾಟಕದಲ್ಲಿ ಹೆಣ್ಣು ಸಾಕ್ಷಾತ್ ದೇವತೆ ಎಂದು ಪಂಚಿಂಗ್ ಡೈಲಾಗ್ ಹೊಡೆದು ಚುನಾವಣೆಯ ರಣ ಭೂಮಿಯಿಂದ ಗೆದ್ದಿರುವ ಕರಾವಳಿಯ ಬಹುತೇಕ ಬಿಜೆಪಿ ಶಾಸಕರು ಇದೀಗ ಜಾಣ ಕಿವುಡು, ಗಾಢ ಮೌನ ತಾಳಿದ್ದಾರೆ. ತಮ್ಮ ಗೆಲುವಿಗಾಗಿ ಮಾತ್ರ ಹಿಂದೂ ರಥದ ಸಾರಥಿ ಗಳಾಗುವ ಇಂಥವರಿಂದ
“ಹೆಣ್ಣೋ ರಕ್ಷತಿ ರಕ್ಷಿತಹ” ಎಂಬಂತಹ ಅಭಿಯಾನ ಕೈಗೊಳ್ಳುವ ದುರವಸ್ಧೆ ಕರಾವಳಿಯ ಪ್ರಜ್ಞಾವಂತ ನಾಗರಿಕರಿಗೆ ಬಂದೋದಗಿದೆ ಎಂದು ಕೋಟ ನಾಗೇಂದ್ರ ಪುತ್ರನ್ ಖೇದ ವ್ಯಕ್ತ ಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಬಿಲ್ಲವ ಮುಖಂಡರು ಹಾಗೂ ವಿವಿಧ ಸಂಘ, ಸಂಸ್ಥೆಯ ನಾಯಕರು, ಗೋಪಾಲ್ ಕೋಟ, ವಸಂತ್ ಸುವರ್ಣ, ಜಗನಾಥ್ ಅಮೀನ್ ಸಾಲಿಗ್ರಾಮ, ಕಿಶೋರ್ ಶೆಟ್ಟಿ ಕೋಟ, ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.