ಡೈಲಿ ವಾರ್ತೆ: 15/ಸೆ./2025

ಉಳ್ಳಾಲ: ಇಂಜಿನ್ ಬಂದ್ ಆಗಿ ದಡಕ್ಕಪ್ಪಳಿಸಿದ ಮೀನುಗಾರಿಕಾ ಬೋಟ್ – ಅಪಾರ ನಷ್ಟ, ಮೀನುಗಾರರು ಪಾರು

ಉಳ್ಳಾಲ: ಮೀನುಗಾರಿಕಾ ಟ್ರಾಲ್ ಬೋಟೊಂದು ಆಳಸಮುದ್ರದಲ್ಲಿ ಇಂಜಿನ್ ವೈಫಲ್ಯದಿಂದ ಕೆಟ್ಟು ನಿಂತಿದ್ದು, ಅಲೆಯ ಹೊಡೆತದಿಂದ ತೇಲಿಕೊಂಡು ಬಂದು ಉಳ್ಳಾಲದ ಸೀಗ್ರೌಂಡ್ ದಡಕ್ಕೆ ಅಪ್ಪಳಿಸಿದೆ. ಘಟನೆಯಲ್ಲಿ ಬೋಟ್‌ನಲ್ಲಿದ್ದ 13 ಮಂದಿ ಮೀನುಗಾರರು ಪವಾಡಸದೃಶವಾಗಿ ಪಾರಾಗಿದ್ದಾರೆ.

ಉಳ್ಳಾಲದ ಮುಕ್ಕಚ್ಚೇರಿ ನಿವಾಸಿ ಮೊಹಮ್ಮದ್ ಅಷ್ಪಕ್ ಎಂಬವರಿಗೆ ಸೇರಿದ ಬುರಾಕ್ ಟ್ರೋಲರ್ ಬೋಟ್ ಮಂಗಳೂರು ಧಕ್ಕೆಯಿಂದ ಕೇರಳ ಭಾಗಕ್ಕೆ ನಿನ್ನೆ ರಾತ್ರಿ ಆಳಸಮುದ್ರ ಮೀನುಗಾರಿಕೆಗೆ ತೆರಳಿತ್ತು.
ಆದರೆ ಆಳಸಮುದ್ರದಲ್ಲಿ ಇಂಜಿನ್ ವೈಫಲ್ಯಗೊಂಡು ಸಮುದ್ರದ ನಡುವೆ ಕೆಟ್ಟು ನಿಂತಿದೆ. ಪರಿಣಾಮ ಅದು ಮುಂದೆ ಸಾಗಲು ಆಗಲಿಲ್ಲ.

ಮಧ್ಯರಾತ್ರಿ ಬೋಟ್‌ ಕೆಟ್ಟು ನಿಂತ ಬಳಿಕ ಉಳಿದ ಮೀನುಗಾರಿಗಾ ಬೋಟ್‌ನವರ ಗಮನಕ್ಕೆ ಬಾರದಿದ್ದರಿಂದ 13ಮಂದಿ ಮೀನುಗಾರರು ಜೀವ ಕೈಯಲ್ಲಿಟ್ಟುಕೊಂಡು ರಾತ್ರಿ ಕಳೆಯುವ ಪರಿಸ್ಥಿತಿಯಿತ್ತು. ಅದೃಷ್ಟವಶಾತ್ ಅಲೆಗಳಿಂದ ತೇಲುತ್ತಾ ಬಂದ ಬೋಟ್ ಸೋಮವಾರ ನಸುಕಿನ ಜಾವ ಸೀಗ್ರೌಂಡ್ ಸಮುದ್ರತೀರಕ್ಕೆ ಬಂದು ಅಪ್ಪಳಿಸಿದೆ.
ಘಟನೆಯಿಂದಾಗಿ ಬೋಟ್ ಮಾಲೀಕರಿಗೆ ಲಕ್ಷಾಂತರ ನಷ್ಟವುಂಟಾಗಿದೆ. ಈ ಬಗ್ಗೆ ಉಳ್ಳಾಲ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.