


ಡೈಲಿ ವಾರ್ತೆ: 16/ಸೆ./2025


ಅಭಿಮಾನ್ ಸ್ಟುಡಿಯೋದಲ್ಲಿ ವಿಷ್ಣುವರ್ಧನ್ ಜನ್ಮದಿನಾಚರಣೆಗೆ ಅವಕಾಶ ಇಲ್ಲ: ಹೈಕೋರ್ಟ್

ಸೆಪ್ಟೆಂಬರ್ 18ರಂದು ‘ಸಾಹಸ ಸಿಂಹ’ ವಿಷ್ಣುವರ್ಧನ್ ಅವರು ಜನ್ಮದಿನ. ಅಂದು ಹಲವು ರೀತಿಯಲ್ಲಿ ಸೆಲೆಬ್ರೇಟ್ ಮಾಡಲು ಅಭಿಮಾನಿಗಳು ಕಾದಿದ್ದಾರೆ. ಈ ಬಾರಿ ವಿಷ್ಣುವರ್ಧನ್ ಅವರಿಗೆ ಮರಣೋತ್ತರವಾಗಿ ‘ಕರ್ನಾಟಕ ರತ್ನ’ ಪ್ರಶಸ್ತಿ ಬಂದಿದೆ.
ಆ ಹಿನ್ನೆಲೆಯಲ್ಲಿ ಅಭಿಮಾನಿಗಳ ಸಂಭ್ರಮ ಡಬಲ್ ಆಗಿದೆ. ಆದರೆ ಅದರ ನಡುವೆ ಒಂದು ಬೇಸರದ ಸುದ್ದಿ ಇದೆ. ವಿಷ್ಣುವರ್ಧನ್ ಅವರ ಸಮಾಧಿ ಸ್ಥಳವಾದ ಅಭಿಮಾನ್ ಸ್ಟುಡಿಯೋದಲ್ಲಿ ಜನ್ಮದಿನ ಆಚರಣೆ ಮಾಡಲು ಹೈಕೋರ್ಟ್ ಅವಕಾಶ ನೀಡಿಲ್ಲ.
ಇತ್ತೀಚಿನ ದಿನಗಳಲ್ಲಿ ಅಭಿಮಾನ್ ಸ್ಡುಡಿಯೋಗೆ ಸಂಬಂಧಿಸಿದಂತೆ ಒಂದಷ್ಟು ಬೆಳವಣಿಗೆಗಳು ನಡೆದಿವೆ. ಅಲ್ಲಿದ್ದ ವಿಷ್ಣುವರ್ಧನ್ ಅವರ ಸಮಾಧಿಯನ್ನು ರಾತ್ರೋರಾತ್ರಿ ನೆಲಸಮ ಮಾಡಲಾಯಿತು. ಆ ಬಳಿಕ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಲು ಆರಂಭಿಸಿದರು. ಅಲ್ಲದೇ, ಆ ಜಾಗವನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳುವ ಬಗ್ಗೆಯೂ ಚರ್ಚೆ ನಡೆಯುತ್ತಿದೆ.
ಈ ಬಾರಿ ಅಭಿಮಾನ್ ಸ್ಡುಡಿಯೋದಲ್ಲಿ ಇರುವ ವಿಷ್ಣುವರ್ಧನ್ ಅವರ ಪುಣ್ಯಭೂಮಿಯಲ್ಲಿ ಹುಟ್ಟುಹಬ್ಬವನ್ನು ಸೆಲೆಬ್ರೇಟ್ ಮಾಡಲು ಅಭಿಮಾನಿಗಳು ಕಾಯುತ್ತಿದ್ದರು. ಅದಕ್ಕೆ ಅವಕಾಶ ನೀಡುವಂತೆ ಕೋರಿ ಹೈಕೋರ್ಟ್ಗೆ ವಿಷ್ಣುವರ್ಧನ್ ಪುಣ್ಯಭೂಮಿ ಟ್ರಸ್ಟ್ ರಿಟ್ ಅರ್ಜಿ ಸಲ್ಲಿಸಿತ್ತು. ಅದರ ವಿಚಾರಣೆ ನಡೆಯುತ್ತಿದೆ. ವಿಚಾರಣೆಯನ್ನು ನ.4ಕ್ಕೆ ಮುಂದೂಡಲಾಗಿದೆ.
‘ಅಭಿಮಾನ್ ಸ್ಟೂಡಿಯೋ ಮಾಲಿಕತ್ವದ ಬಗ್ಗೆ ಹೈಕೋರ್ಟ್ ಆದೇಶವಿದೆ. 2025ರ ಜ.13ರ ಆದೇಶವಿರುವಾಗ ವಿಭಿನ್ನ ರೀತಿಯ ಆದೇಶ ಸಾಧ್ಯವಿಲ್ಲ’ ಎಂದು ನ್ಯಾ. ಬಿ.ಎಂ. ಶ್ಯಾಮ್ ಪ್ರಸಾದ್ ಅವರಿದ್ದ ಹೈಕೋರ್ಟ್ ಪೀಠ ಅಭಿಪ್ರಾಯಪಟ್ಟಿದೆ. ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ, ಜಿಲ್ಲಾಧಿಕಾರಿ, ಉಪ ಅರಣ್ಯ ಸಂರಕ್ಷಣಾಧಿಕಾರಿ, ಡಾ. ವಿಷ್ಣುವರ್ಧನ್ ಪ್ರತಿಷ್ಠಾನದ ಸದಸ್ಯ, ಕಾರ್ಯದರ್ಶಿ, ಅಭಿಮಾನ್ ಸ್ಟುಡಿಯೋದ ಬಿ.ಎಸ್. ಕಾರ್ತಿಕ್ ಅವರಿಗೆ ನೋಟಿಸ್ ಜಾರಿಗೆ ಸೂಚನೆ ನೀಡಲಾಗಿದೆ.
ಅಭಿಮಾನ್ ಸ್ಟುಡಿಯೋ ಜಾಗದಲ್ಲಿ ಅಕ್ರಮ ನಡೆದಿದೆ ಎಂಬ ಆರೋಪವನ್ನು ಅಭಿಮಾನಿಗಳು ಮಾಡುತ್ತಿದ್ದಾರೆ. ಒಂದುವೇಳೆ ಆ ಜಾಗವನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಂಡರೆ ಅದರಲ್ಲಿ ಮತ್ತೆ ವಿಷ್ಣುವರ್ಧನ್ ಅವರ ಸಮಾಧಿ ನಿರ್ಮಾಣ ಮಾಡಬೇಕು ಎಂಬ ಬೇಡಿಕೆ ಅಭಿಮಾನಿಗಳದ್ದು. ಆದರೆ ಸದ್ಯಕ್ಕಂತೂ ಅಲ್ಲಿ ಹುಟ್ಟುಹಬ್ಬ ಆಚರಿಸಲು ಅವಕಾಶ ಸಿಗುತ್ತಿಲ್ಲ.