ಡೈಲಿ ವಾರ್ತೆ: 16/ಸೆ./2025

ಶಿವಮೊಗ್ಗ | ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಉರುಳಿದ ಕಾರು – ವೃದ್ಧೆ ಸಾವು, ಇಬ್ಬರು ಗಂಭೀರ

ಶಿವಮೊಗ್ಗ: ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಕೆರೆಗೆ ಉರುಳಿ ಬಿದ್ದ ಪರಿಣಾಮ ಸ್ತ್ಗಳದಲ್ಲಿಯೇ ಓರ್ವ ವೃದ್ಧೆ ಮೃತಪಟ್ಟಿದ್ದು ಇನ್ನಿಬ್ಬರಿಗೆ ಗಂಭೀರ ಗಾಯಗೊಂಡ ಘಟನೆ ರಿಪ್ಪನ್‌ಪೇಟೆಯಲ್ಲಿ ನಡೆದಿದೆ.

ಮೃತರನ್ನು ತ್ಯಾಗರ್ತಿಯ ಪಾರ್ವತಮ್ಮ (65) ಎಂದು ಗುರುತಿಸಲಾಗಿದೆ. ತ್ಯಾಗರ್ತಿಯಿಂದ ಅಮ್ಮನಘಟ್ಟ ಜೇನುಕಲ್ಲಮ್ಮ ದೇವಿಯ ದರ್ಶನ ಪಡೆದು ಹಿಂದಿರಿಗುತ್ತಿರುವ ವೇಳೆ ಪಟ್ಟಣದ ಚಿಪ್ಪಿಗರ ಕೆರೆ ಏರಿಯ ಬಳಿ ಚಾಲಕನ ನಿಯಂತ್ರಣ ತಪ್ಪಿ ಕಾರು ಕೆರೆಗೆ ಉರುಳಿ ಬಿದ್ದಿದೆ.

ಈ ಸಂಧರ್ಭದಲ್ಲಿ ರಸ್ತೆಯಲ್ಲಿ ಹಾದುಹೋಗುತಿದ್ದ ಸಾರ್ವಜನಿಕರು ಕೂಡಲೇ ಸಹಾಯಕ್ಕೆ ತೆರಳಿ ಇಬ್ಬರನ್ನು ರಕ್ಷಿಸಿದ್ದಾರೆ. ಅಷ್ಟರಲ್ಲಾಗಲೇ ವೃದ್ಧೆಯ ಪ್ರಾಣಪಕ್ಷಿ ಹಾರಿಹೋಗಿತ್ತು.

ಕಾರಿನಲ್ಲಿದ್ದ ಯುವಕ ಹಾಗೂ ಯುವತಿಯನ್ನು ಸ್ಥಳೀಯರು ಜೀವದ ಹಂಗು ತೊರೆದು ಕಾಪಾಡಿ ತಕ್ಷಣ ಸ್ಥಳೀಯ ಆಸ್ಪತ್ರೆಗೆ ಕರೆತಂದಿದ್ದರು. ಗಾಯಾಳುಗಳಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗಕ್ಕೆ ರವಾನಿಸಲಾಗಿದೆ. ವಿಷಯ ತಿಳಿಯುತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಬೇಳೂರು ಗೋಪಾಲಕೃಷ್ಣ ಗಾಯಾಳುಗಳನ್ನು ವಿಚಾರಿಸಿದ್ದಾರೆ.