ಡೈಲಿ ವಾರ್ತೆ: 23/ಸೆ./2025

ಚಾಮುಂಡಿಬೆಟ್ಟದ ಅರ್ಚಕ ಹೃದಯಾಘಾತದಿಂದ ನಿಧನ

ಮೈಸೂರು: ಮೈಸೂರಿನ ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇಗುಲದ ಅರ್ಚಕ ರಾಜು ಹೃದಯಾಘಾತದಿಂದ ನಿಧನರಾದರು. ಅರ್ಚಕ ರಾಜು ನಿಧನದ ಕಾರಣ ಸದ್ಯ ಚಾಮುಂಡೇಶ್ವರಿ ದೇಗುಲದ ಗರ್ಭಗುಡಿಗೆ ತೆರೆ ಎಳೆಯಲಾಗಿದೆ.

ರಾತ್ರಿ ವರೆಗೂ ಉತ್ಸವಮೂರ್ತಿಯ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಇಂದು ರಾತ್ರಿವರೆಗೂ ಮೂಲ ವಿಗ್ರಹದ ದರ್ಶನ ಇರುವುದಿಲ್ಲ. ವಿಶ್ವವಿಖ್ಯಾತ ಮೈಸೂರು ದಸರಾಗೆ ಸೋಮವಾರ ವಿಧ್ಯುಕ್ತ ಚಾಲನೆ ನೀಡಲಾಗಿತ್ತು. ಅದಾರ ಮರುದಿನವೇ ಅರ್ಚಕರ ನಿಧನವಾಗಿರುವುದರಿಂದ ಧಾರ್ಮಿಕ ಕಾರ್ಯಕ್ರಮಗಳಿಗೆ ಅಡಚಣೆ ಉಂಟಾಗಿದೆ.

ಚಾಮುಂಡಿ ಬೆಟ್ಟದಲ್ಲಿ ಸೂತಕದ ಛಾಯೆ
ದಸರಾ ಆರಂಭವಾದ ಮರುದಿನವೇ ಈ ಘಟನೆ ಸಂಭವಿಸಿರುವುದರಿಂದ ಚಾಮುಂಡಿ ಬೆಟ್ಟದಲ್ಲಿ ಸೂತಕದ ಛಾಯೆ ಆವರಿಸಿದೆ. ಆದಾಗ್ಯೂ, ದಸರಾ ಉತ್ಸವಕ್ಕೆ ಇದರಿಂದ ಯಾವುದೇ ಅಡಚಣೆ ಆಗುವುದಿಲ್ಲ. ಕೆಲವು ವಿಧಿವಿಧಾನಗಳ ನಂತರ ಗರ್ಭಗುಡಿ ಬಾಗಿಲು ತೆರೆಯಲಿದೆ. ನವರಾತ್ರಿ ಪೂಜೆಗಳು ಮಾಮೂಲಿಯಂತೆಯೇ ನಡೆಯಲಿವೆ ಎಂದು ದೇಗುಲದ ಮೂಲಗಳು ತಿಳಿಸಿವೆ.

ದಸರಾಗೆ ಚಾಲನೆ ದೊರೆತ ಮರುದಿನವೇ ಚಾಮುಂಡೇಶ್ವರಿ ದೇಗುಲದ ಅರ್ಚಕರು ನಿಧನರಾಗಿರುವ ಬಗ್ಗೆ ಇದೀಗ ಸಾಮಾಜಿಕ ಮಾಧ್ಯಮಗಳಲ್ಲೂ ವಿವಿಧ ರೀತಿಯ ಚರ್ಚೆ ಆರಂಭವಾಗಿದೆ.

ಮೃತರು ಕಳೆದ ಕೆಲವು ವರ್ಷಗಳಿಂದ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಶಿವನ ಅರ್ಚಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ರಾಜು ಅವರ ಅಂತ್ಯಸಂಸ್ಕಾರದ ಬಳಿಕ ಸಾರ್ವಜನಿಕರಿಗೆ ದೇವಿ ದರ್ಶನಕ್ಕೆ ಅನುವು ಮಾಡಿಕೊಡಲಾಗುತ್ತದೆ ಎಂದು ಚಾಮುಂಡೇಶ್ವರಿ ದೇಗುಲದ ಆಡಳಿತ ಮಂಡಳಿ ತಿಳಿಸಿದೆ.