ಡೈಲಿ ವಾರ್ತೆ: 23/ಸೆ./2025

ಹನುಮಂತನನ್ನು ನಕಲಿ ದೇವರು ಎಂದ ಟ್ರಂಪ್ ಪಕ್ಷದ ನಾಯಕ,ಭುಗಿಲೆದ್ದ ಆಕ್ರೋಶ!

ವಾಷಿಂಗ್ಟನ್: ಇತ್ತೀಚೆಗೆ ಅಮೆರಿಕದ ಟೆಕ್ಸಾಸ್​​ನಲ್ಲಿ 90 ಅಡಿ ಎತ್ತರದ ಬೃಹತ್ ಹನುಮಂತನ ಪ್ರತಿಮೆಯನ್ನು ಸ್ಥಾಪಿಸಲಾಗಿದೆ.
ಈ ಪ್ರತಿಮೆಯನ್ನು ಸ್ಟ್ಯಾಚ್ಯೂ ಆಫ್ ಯೂನಿಯನ್ ಎಂದು ಕರೆಯಲಾಗಿದೆ. ಈಗ ಟೆಕ್ಸಾಸ್​​ನ ರಿಪಬ್ಲಿಕ್ ಪಕ್ಷದ ನಾಯಕರೊಬ್ಬರು ಹನುಮಂತನನ್ನು ಟೀಕಿಸಿದ್ದು, ಮತ್ತೊಂದು ವಿವಾದವನ್ನು ಹುಟ್ಟುಹಾಕಿದೆ.
ನಮ್ಮದು ಕ್ರಿಶ್ಚಿಯನ್ ರಾಷ್ಟ್ರ ಆದರೆ ಸುಳ್ಳು ಹಿಂದೂ ದೇವರ ಪ್ರತಿಮೆಯನ್ನು ಇಲ್ಲೇಕೆ ನಿರ್ಮಿಸಲು ಅನುಮತಿ ನೀಡಿದ್ದೇವೆ ಎಂದು ಪ್ರಶ್ನಿಸಿದ್ದಾರೆ.

ಸ್ಥಳೀಯ ರಿಪಬ್ಲಿಕನ್ ನಾಯಕ ಮತ್ತು ಸೆನೆಟ್ ಅಭ್ಯರ್ಥಿ ಅಲೆಕ್ಸಾಂಡರ್ ಡಂಕನ್ ಅವರ ಪ್ರತಿಮೆಯ ಕುರಿತು ಹೇಳಿಕೆಯು ಹಿಂದೂ ಸಮುದಾಯ ಮತ್ತು ಇತರರ ಭಾವನೆಗಳನ್ನು ನೋವುಂಟು ಮಾಡಿದೆ. ರಿಪಬ್ಲಿಕನ್ ನಾಯಕ ಟೆಕ್ಸಾಸ್‌ನ ಶುಗರ್ ಲ್ಯಾಂಡ್‌ನಲ್ಲಿರುವ ಶ್ರೀ ಅಷ್ಟಲಕ್ಷ್ಮಿ ದೇವಸ್ಥಾನದಲ್ಲಿ ಹನುಮಾನ್ ಜೊತೆಗೆ ಇರುವ ವಿಗ್ರಹದ ವೀಡಿಯೊವನ್ನು ಸಹ ಹಂಚಿಕೊಂಡಿದ್ದಾರೆ.

ಅಲೆಕ್ಸಾಂಡರ್ ಡಂಕನ್ ಅವರ ಹೇಳಿಕೆ ತಕ್ಷಣವೇ ಆನ್‌ಲೈನ್‌ನಲ್ಲಿ ಟೀಕೆಗೆ ಗುರಿಯಾಯಿತು. ಹಿಂದೂ ಅಮೇರಿಕನ್ ಫೌಂಡೇಶನ್ ಅವರ ಹೇಳಿಕೆಯನ್ನು ಹಿಂದೂ ವಿರೋಧಿ ಮತ್ತು ಪ್ರಚೋದನಕಾರಿ ಎಂದು ಕರೆದಿದೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಫೌಂಡೇಶನ್ ಟೆಕ್ಸಾಸ್ ರಿಪಬ್ಲಿಕನ್ ಪಕ್ಷಕ್ಕೆ ಔಪಚಾರಿಕ ದೂರು ನೀಡಿದೆ.

ಅಲೆಕ್ಸಾಂಡರ್ ಡಂಕನ್ ಟೆಕ್ಸಾಸ್‌ನ ರಿಪಬ್ಲಿಕನ್ ಪಕ್ಷದವರಾಗಿದ್ದು, 2026 ರ ಯು.ಎಸ್. ಸೆನೆಟ್ ಚುನಾವಣೆಯಲ್ಲಿ ಟೆಕ್ಸಾಸ್ ಅನ್ನು ಪ್ರತಿನಿಧಿಸಲು ತಮ್ಮ ಉಮೇದುವಾರಿಕೆಯನ್ನು ಘೋಷಿಸಿದ್ದಾರೆ. ತಮ್ಮ ರಾಜಕೀಯ ವೃತ್ತಿಜೀವನದ ಮೊದಲು, ಅವರು ಸುಮಾರು 12 ವರ್ಷಗಳ ಕಾಲ ಪೊಲೀಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದರು. ಡಂಕನ್ ಒಬ್ಬ ಕ್ರಿಶ್ಚಿಯನ್ ಮತ್ತು ಸಂಪ್ರದಾಯವಾದಿಯಾಗಿದ್ದು, ತಮ್ಮನ್ನು ತಾವು ರಾಷ್ಟ್ರೀಯವಾದಿ ಎಂದು ಕರೆದುಕೊಳ್ಳುತ್ತಾರೆ.

ಈ ಹೇಳಿಕೆಯು ಧಾರ್ಮಿಕ ತಾರತಮ್ಯವನ್ನು ಉತ್ತೇಜಿಸುತ್ತದೆ ಮತ್ತು ಇದು ಅಮೆರಿಕ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ ಎಂದು ಸಂಘಟನೆ ಪ್ರತಿಪಾದಿಸಿದೆ. ಶುಗರ್ ಲ್ಯಾಂಡ್‌ನಲ್ಲಿರುವ ಶ್ರೀ ಅಷ್ಟಲಕ್ಷ್ಮಿ ದೇವಸ್ಥಾನದಲ್ಲಿದೆ. 90 ಅಡಿ ಎತ್ತರ, 90 ಟನ್ ತೂಕದ ಕಂಚಿನ ಪ್ರತಿಮೆಯನ್ನು ಆಗಸ್ಟ್ 2024 ರಲ್ಲಿ ಭಾರತದ ಸ್ವಾತಂತ್ರ್ಯ ದಿನಾಚರಣೆಯಂದು ಉದ್ಘಾಟಿಸಲಾಯಿತು.

ಈ ಪ್ರತಿಮೆ ಭಕ್ತಿ, ಶಕ್ತಿ ಮತ್ತು ಏಕತೆಯನ್ನು ಸಂಕೇತಿಸುತ್ತದೆ, ಇದು ಹಿಂದೂ ಪುರಾಣಗಳಲ್ಲಿ ರಾಮ ಮತ್ತು ಸೀತೆಯನ್ನು ಒಂದುಗೂಡಿಸಿದ ಹನುಮಂತನ ಪಾತ್ರವನ್ನು ಪ್ರತಿಬಿಂಬಿಸುತ್ತದೆ.

ಈಗಾಗಲೇ ಸುಂಕ ವಿಚಾರವಾಗಿ ಭಾರತ ಹಾಗೂ ಅಮೆರಿಕದ ನಡುವೆ ಮುಸುಕಿನ ಗುದ್ದಾಟ ನಡೆದಿದೆ. ಇದರ ಬೆನ್ನಲ್ಲೇ ಅಮೆರಿಕವು ಎಚ್​1ಬಿ ವೀಸಾದ ಶುಲ್ಕವನ್ನು ಹೆಚ್ಚಳ ಮಾಡಿರುವುದು ಕೂಡ ಭಾರತಕ್ಕೆ ದೊಡ್ಡ ಪೆಟ್ಟು ಕೊಟ್ಟಂತಾಗಿದೆ. ಈ ಸಮಯದಲ್ಲೇ ರಿಪಬ್ಲಿಕನ್ ಪಕ್ಷದ ನಾಯಕ ಈ ರೀತಿಯಾಗಿ ಹೇಳಿಕೆ ನೀಡಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.