



ಡೈಲಿ ವಾರ್ತೆ: 29/ಸೆ./2025

ಮಂಗಳೂರು| ಜುವೆಲ್ಲರಿ ಸಿಬಂದಿ ಅಪಹರಿಸಿ ಒಂದೂವರೆ ಕೆಜಿ ಚಿನ್ನ ದರೋಡೆ ಪ್ರಕರಣ – ಅಪ್ರಾಪ್ತ ಸೇರಿ ಐವರು ಸಿಸಿಬಿ ಬಲೆಗೆ

ಮಂಗಳೂರು: ಜುವೆಲ್ಲರಿ ಸಿಬಂದಿಯನ್ನು ಅಪಹರಿಸಿ ಒಂದೂವರೆ ಕೋಟಿ ಮೌಲ್ಯದ ಚಿನ್ನದ ಗಟ್ಟಿಯನ್ನು ದರೋಡೆಗೈದ ಪ್ರಕರಣದಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಅಪ್ರಾಪ್ತ ಬಾಲಕ ಸೇರಿ ನಾಲ್ವರನ್ನು ಬಂಧಿಸಿದ್ದಾರೆ.
ಸೆ.26 ರಂದು ಹಂಪನಕಟ್ಟೆಯ ಚಾಯ್ಸ್ ಗೋಲ್ಡ್ ಹೆಸರಿನ ಚಿನ್ನಾಭರಣದ ಅಂಗಡಿಯ ಕೆಲಸಗಾರ ಮುಸ್ತಾಫ ಎಂಬವರು ಸ್ಕೂಟರ್ ಸೀಟಿನ ಅಡಿಯಲ್ಲಿ ಚಿನ್ನದ ಗಟ್ಟಿಯನ್ನು ಇಟ್ಟುಕೊಂಡು ಹೋಗುತ್ತಿದ್ದಾಗ ರಾತ್ರಿ ಸುಮಾರು 8-45 ವೇಳೆಗೆ ದರೋಡೆ ನಡೆದಿತ್ತು. ಮಂಗಳೂರು ಕಾರ್ ಸ್ಟ್ರೀಟ್ ವೆಂಕಟರಮಣ ದೇವಸ್ಥಾನದ ಎದುರಿನ ರಸ್ತೆಯಲ್ಲಿ ಇಬ್ಬರು ಆರೋಪಿಗಳು ಸ್ಕೂಟರಿನಲ್ಲಿ ಬಂದು ತಡೆದು ನಿಲ್ಲಿಸಿ, ಇನ್ನಿಬ್ಬರು ಕಾರಿನಲ್ಲಿ ಬಂದು ಮುಸ್ತಾಫ ರವರನ್ನು ಕಾರಿನಲ್ಲಿ ಅಪಹರಿಸಿ ಹಲ್ಲೆ ನಡೆಸಿ ಎಕ್ಕೂರು ಎಂಬಲ್ಲಿ ಇಳಿಸಿ ಚಿನ್ನದ ಗಟ್ಟಿಯನ್ನು ದರೋಡೆ ಮಾಡಿಕೊಂಡು ಹೋಗಿದ್ದರು. ಈ ಬಗ್ಗೆ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಅ.ಕ್ರ. 111/2025 ರ ಕಲಂ 137(2), 310(2) BNS -2023 ರಂತೆ ಪ್ರಕರಣ ದಾಖಲಾಗಿತ್ತು.
ಒಂದೂವರೆ ಕೋಟಿ ಮೌಲ್ಯದ 1650 ಗ್ರಾಮ್ ಚಿನ್ನದ ಗಟ್ಟಿಯನ್ನು ದರೋಡೆ ಮಾಡಲಾಗಿತ್ತು.
ಬಂಧಿತ ಆರೋಪಿಗಳಾದ
ಕೆ.ಸಿ.ರೋಡ್ ಕೋಟೆಕಾರು ನಿವಾಸಿ ಫಾರಿಶ್(18), ಮುಕ್ಕಚೇರಿ ನಿವಾಸಿ ಸಫ್ಘಾನ್ (23), ಉಳ್ಳಾಲ ಮಾಸ್ತಿಕಟ್ಟೆ ನಿವಾಸಿ ಅರಾಫತ್ ಆಲಿ(18), ಉಳ್ಳಾಲ ದರ್ಗಾ ಬಳಿಯ ಫರಾಝ್, (19) ಮತ್ತು ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನೂ ಅರೆಸ್ಟ್ ಆಗಿದ್ದಾನೆ.
ಪ್ರಕರಣದಲ್ಲಿ ಅಪ್ರಾಪ್ತ ಬಾಲಕ ಹಂಪನಕಟ್ಟೆಯ ಚಾಯ್ಸ್ ಗೋಲ್ಡ್ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದು ಚಿನ್ನದ ಗಟ್ಟಿಯನ್ನು ಕೊಂಡುಹೋಗುವ ಮಾಹಿತಿಯನ್ನು ಆರೋಪಿಗಳಿಗೆ ನೀಡಿದ್ದರು. ಮುಸ್ತಫಾ ಚಿನ್ನದ ಗಟ್ಟಿಯೊಂದಿಗೆ ತೆರಳುವ ಚಲನವಲನದ ಮಾಹಿತಿಯನ್ನು ಆರೋಪಿ ಫಾರಿಶ್ ನಿಗೆ ನೀಡಿದ್ದು ಅದರಂತೆ ಆರೋಪಿಗಳು ಪೂರ್ವಯೋಜಿತ ಸಂಚು ರೂಪಿಸಿದ್ದರು.
ಆರೋಪಿ ಸಫ್ಘಾನ್ ಕಾರನ್ನು ಒದಗಿಸಿದ್ದು, ಚಿನ್ನದ ಗಟ್ಟಿಯನ್ನು ಇಟ್ಟುಕೊಂಡು ಹೋಗುತ್ತಿದ್ದಾಗ ಆರೋಪಿಗಳಾದ ಅರಾಫತ್ ಆಲಿ ಮತ್ತು ಫರಾಝ್ ಸುಜುಕಿ ಆಕ್ಸೆಸ್ ಸ್ಕೂಟರಿನಲ್ಲಿ ಬಂದು ಅಡ್ಡಗಟ್ಟಿ, ಇದೇ ಸಮಯ ಉಳಿದ ಆರೋಪಿಗಳು ಸಫ್ಘಾನ್ ಒದಗಿಸಿದ ಬಿಳಿ ಬಣ್ಣದ ಕಾರಿನಲ್ಲಿ ಬಂದು ಮುಸ್ತಾಫರವರನ್ನು ಬಲತ್ಕಾರವಾಗಿ ಕಾರಿನಲ್ಲಿ ಹಾಕಿ ಅಪಹರಿಸಿಕೊಂಡು ಹೋಗಿದ್ದರು.
ಪ್ರಕರಣದಲ್ಲಿ ಕೃತ್ಯಕ್ಕೆ ಸುಜುಕಿ ಆಕ್ಸೆಸ್ ಸ್ಕೂಟರನ್ನು ಸ್ವಾಧೀನಪಡಿಸಿದ್ದು ಉಳಿದ ಆರೋಪಿಗಳನ್ನು ದಸ್ತಗಿರಿ ಮಾಡಲು ಹಾಗೂ ಕೃತ್ಯಕ್ಕೆ ಬಳಸಿದ ಕಾರು ಮತ್ತು ಸೊತ್ತನ್ನು ಸ್ವಾಧೀನಪಡಿಸಿಕೊಳ್ಳಲು ಬಾಕಿ ಇರುತ್ತದೆ. ಪ್ರಕರಣದ ಆರೋಪಿಗಳನ್ನು ಮಂಗಳೂರು ಉತ್ತರ ಪೊಲೀಸ್ ಠಾಣೆ ಅಧಿಕಾರಿ ಸಿಬ್ಬಂದಿ ಹಾಗೂ ಮಂಗಳೂರು ಸಿಸಿಬಿ ಘಟಕದ ಅಧಿಕಾರಿ ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸಿ ದಸ್ತಗಿರಿ ಮಾಡಿದ್ದಾರೆ.