



ಡೈಲಿ ವಾರ್ತೆ: 04/ಅ./2025

AKMS ಬಸ್ ಮಾಲೀಕ ಸೈಫ್ ಹತ್ಯೆಗೆ ಸಂಚು ರೂಪಿಸಿದ ಸುಂದರಿ ರಿಧಾ ಶಭಾನಾ ಅರೆಸ್ಟ್

ಉಡುಪಿ: ಕಳೆದ ಶನಿವಾರ ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಕೊಡವೂರು ಸಾಲ್ಮರದ ಮನೆಯಲ್ಲಿ ನಡೆದ ಎಕೆಎಂಎಸ್ ಬಸ್ ಮಾಲಕ, ರೌಡಿ ಶೀಟರ್ ಸೈಫ್ ಯಾನೆ ಸೈಫುದ್ದೀನ್ ಅತ್ರಾಡಿ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಮತ್ತೋರ್ವ ಆರೋಪಿ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಮಹಿಳೆಯನ್ನು ಈಗಾಗಲೇ ಹತ್ಯಾ ಆರೋಪಿಯಾಗಿ ಬಂಧನದಲ್ಲಿರುವ ಬಡಗಬೆಟ್ಟು ಮಿಷನ್ ಕಂಪೌಂಡ್ ನಿವಾಸಿ ಮಹಮದ್ ಫೈಸಲ್ ಖಾನ್ ಪತ್ನಿ ರಿಧಾ ಶಭಾನಾ (27) ಎಂದು ಗುರುತಿಸಲಾಗಿದೆ.
ಈಕೆ ಕೊಲೆಗೆ ಒಳಸಂಚು ರೂಪಿಸಿ ಕೃತ್ಯದಲ್ಲಿ ಭಾಗಿಯಾಗಿದ್ದು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
ಮಿಕ್ಕುಳಿದ ಆರೋಪಿಗಳಾದ ಉಡುಪಿ ಕರಂಬಳ್ಳಿ ಜನತಾ ಕಾಲೋನಿಯ ಮೊಹಮದ್ ಶರೀಫ್, ಸುರತ್ಕಲ್ ಕೃಷಾಪುರದ ಏಳನೇ ಬ್ಲಾಕ್ ನಿವಾಸಿ ಅಬ್ದುಲ್ ಶುಕೂರು ಯಾನೆ ಅದ್ದು ಬಂಧನದಲ್ಲಿದ್ದಾರೆ. ಇದರಲ್ಲಿ ಶರೀಫ್ ಹಾಗೂ ಅದ್ದು ಎಕೆಎಂಎಸ್ ಬಸ್‌ನಲ್ಲಿ ಚಾಲಕರಾಗಿ ದುಡಿಯುತ್ತಿದ್ದರೆ, ಫೈಸಲ್ ಖಾನ್ ಸೈಫ್‌ನ ಆತ್ಮೀಯನಾಗಿದ್ದನು.ಹತ್ಯೆಯ ಹಿಂದೆ ಹಲವಾರು ಕಾರಣಗಳು ಸದ್ದು ಮಾಡುತಲಿದ್ದು,ಇದೀಗ ಸುಂದರಿಯೋರ್ವಳ ಬಂಧನದೊಂದಿಗೆ ಹತ್ಯಾ ಪ್ರಕರಣ ಮತ್ತೊಂದು ತಿರುವನ್ನು ಪಡೆದಿದೆ.