
ಡೈಲಿ ವಾರ್ತೆ: 06/ಅ./2025
ಅಜೆಕಾರು: ಮನೆಯವರನ್ನು ಬೆದರಿಸಿ ಹಟ್ಟಿಯಿಂದ ದನಗಳ್ಳತನ ಪ್ರಕರಣ – ಮೂವರು ಆರೋಪಿಗಳ ಬಂಧನ

ಕಾರ್ಕಳ: ಅಜೆಕಾರು ಪೊಲೀಸ್ ಠಾಣೆ ವ್ಯಾಪ್ತಿಯ ಶಿರ್ಲಾಲು ಎಂಬಲ್ಲಿ ಕೆಲವು ದಿನಗಳ ಹಿಂದೆ ತಲವಾರು ತೋರಿಸಿ ಬೆದರಿಸಿ ಹಟ್ಟಿಯಲ್ಲಿದ್ದ ದನಗಳನ್ನು ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಪೊಲೀಸರು ಬಂದಿಸಿದ್ದಾರೆ.
ಬಂಧಿತ ಆರೋಪಿಗಳು ಕಾರ್ಕಳ ನಲ್ಲೂರು ಗ್ರಾಮದ ಬೋರ್ಕಟ್ಟೆಯ ಮೊಹಮ್ಮದ್ ಯೂನಿಸ್ (31), ಮೂಡಬಿದ್ರೆ ಕಲ್ಲಬೆಟ್ಡುವಿನ ಮೊಹಮ್ಮದ್ ನಾಸೀರ್ (28), ಮೂಡಬಿದ್ರೆ ಪುತ್ತಿಗೆ ಗ್ರಾಮದ ಮಿಜಾರಿನ ಮೊಹಮ್ಮದ್ ಇಕ್ಬಾಲ್ (29) ಎಂದು ಗುರುತಿಸಲಾಗಿದೆ.
ಇವರಿಂದ ಕೃತ್ಯಕ್ಕೆ ಬಳಸಿದ್ದ 2 ತಲವಾರು, ಕಾರು, ಬೋಲೆರೋ ವಾಹನ, 5 ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವುಗಳ ಒಟ್ಟು ಮೌಲ್ಯ 5,87,000ರೂ. ಎಂದು ಅಂದಾಜಿಸಲಾಗಿದೆ.
ಸೆ.28ರಂದು ರಾತ್ರಿ ಜಯಶ್ರೀ ಎಂಬವರ ಮನೆಯ ದನದ ಕೊಟ್ಟಿಗೆಗೆ ಮೂವರು ಅಪರಿಚಿತ ವ್ಯಕ್ತಿಗಳು ತಲವಾರುಗಳೊಂದಿಗೆ ನುಗ್ಗಿ, ತಲವಾರು ತೋರಿಸಿ ಬೆದರಿಸಿ, ಕೊಟ್ಟಿಗೆಯಲ್ಲಿದ್ದ ಸುಮಾರು 35,000ರೂ. ಮೌಲ್ಯದ 3 ಹಸುಗಳನ್ನು ಕಳ್ಳತನ ಮಾಡಿರುವ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಸಂಬಂಧ ಕಾರ್ಕಳ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕಿ ಡಾ. ಹರ್ಷಾ ಪ್ರಿಯಂವದಾ ಮಾರ್ಗದರ್ಶನದಲ್ಲಿ ಪ್ರಕರಣದ ತನಿಖಾಧಿಕಾರಿ ಮಂಜಪ್ಪ ಡಿ.ಆರ್ ಹಾಗೂ ಅಜೆಕಾರು ಠಾಣಾ ಎಸ್ಸೈ ಮಹೇಶ್ ಟಿ.ಎಂ. ನೇತೃತ್ವದಲ್ಲಿ ತನಿಖಾ ತಂಡವನ್ನು ರಚಿಸಿದ್ದು, ತನಿಖಾ ತಂಡವು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಈ ಕಾರ್ಯಾಚರಣೆಯಲ್ಲಿ ಅಜೆಕಾರು ಪೊಲೀಸ್ ಠಾಣಾ ಪ ಸಿಬ್ಬಂದಿ ಸತೀಶ್ ಬೆಳ್ಳೆ, ಪ್ರದೀಪ್ ಶೆಟ್ಟಿ, ಮೂರ್ತಿ ಕೆ. ಹೆಬ್ರಿ ಠಾಣಾ ಸಿಬ್ಬಂದಿ ಸುಜೀತ್ ಕುಮಾರ್, ಕಾರ್ಕಳ ಗ್ರಾಮಾಂತರ ಠಾಣೆಯ ಮಹಾಂತೇಶ್, ಕಾರ್ಕಳ ವೃತ್ತ ನಿರೀಕ್ಷಕರ ಕಚೇರಿಯ ವಿಶ್ವನಾಥ ಮತ್ತು ಶಶಿಕುಮಾರ್ ಭಾಗವಹಿಸಿದ್ದರು.