



ಡೈಲಿ ವಾರ್ತೆ: 06/ಅ./2025

ಜಾತಿ ಗಣತಿಗೆ ಹೋಗಿದ್ದ ಶಿಕ್ಷಕಿ ಮೇಲೆ ನಾಯಿ ದಾಳಿ – ಸ್ಥಳೀಯರ ಆಕ್ರೋಶ

ಬೇಲೂರು: ಜಾತಿಗಣತಿ ಸಮೀಕ್ಷೆಗೆ ಹೋಗಿದ್ದ ಶಿಕ್ಷಕಿ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿದ ಘಟನೆ ಹಾಸನ ಜಿಲ್ಲೆ ಬೇಲೂರಿನ ಹೊಯ್ಸಳ ನಗರದ ಬಡಾವಣೆಯಲ್ಲಿ ಭಾನುವಾರ ನಡೆದಿದೆ.
ನಾಯಿ ದಾಳಿಗೆ ಒಳಗಾದ ಶಿಕ್ಷಕಿ ನೆಹರೂ ನಗರ ಜಿಎಸ್‌ಇಎಸ್ ಶಾಲೆಯ ಚಿಕ್ಕಮ್ಮ ಎಂದು ತಿಳಿದು ಬಂದಿದೆ.
ಚಿಕ್ಕಮ್ಮ ಅವರು ಟೈಲರ್ ನವೀನ್ ಅವರ ಮನೆಗೆ ಸಮೀಕ್ಷೆಗೆ ಹೋದ ಸಂದರ್ಭದಲ್ಲಿ ಬೀದಿ ನಾಯಿ ಚಿಕ್ಕಮ್ಮನವರ ಮೇಲೆ ದಾಳಿ ನಡೆಸಿ, ಕೆನ್ನೆ, ಕಿವಿ, ತೊಡೆ ಹಾಗೂ ಹೊಟ್ಟೆ ಭಾಗದಲ್ಲಿ ಕಚ್ಚಿ ತೀವ್ರವಾಗಿ ಗಾಯಗೊಳಿಸಿದೆ. ಪತಿ ಶಿವಕುಮಾರ್, ಪತ್ನಿಯನ್ನು ಬಿಡಿಸಲು ಹೋದ ಸಮಯದಲ್ಲಿ ಅವರಿಗೂ ನಾಯಿ ಕಚ್ಚಿದ್ದು, ಅವರಿಗೆ ಚಿಕ್ಕ ಪುಟ್ಟ ಗಾಯಗಳಾಗಿವೆ. ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳೀಯರ ಆಕ್ರೋಶ:
ಬಳಿಕ ಇದೇ ನಾಯಿ ಇತರ ನಾಯಿಗಳ ಜೊತೆ ಸೇರಿಕೊಂಡು ಜೈ ಭೀಮ್ ನಗರದ ಬೀದಿಯಲ್ಲಿ ಆಟವಾಡುತ್ತಿದ್ದ ಕಿಶನ್ ಎಂಬ 5 ವರ್ಷದ ಬಾಲಕ, ಆತನ ತಾತ ಧರ್ಮಯ್ಯ ಹಾಗೂ ಜೊತೆಯಲ್ಲಿದ್ದ ಸಚಿನ್, ಪೃಥ್ವಿ ಎಂಬುವರಿಗೆ ಕಚ್ಚಿದೆ. ಇದರಿಂದ ಆಕ್ರೋಶಗೊಂಡ ಸ್ಥಳೀಯರು ಒಂದು ನಾಯಿಯನ್ನು ಹೊಡೆದು ಸಾಯಿಸಿದ್ದಾರೆ.