ಡೈಲಿ ವಾರ್ತೆ: 06/ಅ./2025

ವಾರಾಂತ್ಯದಲ್ಲಿ ಭರ್ಜರಿ ಕಲೆಕ್ಷನ್​: ದಾಖಲೆ ಬರೆದ ‘ಕಾಂತರ ಚಾಪ್ಟರ್1’!

ಡಿವೈನ್​ ಸ್ಟಾರ್ ರಿಷಬ್ ಶೆಟ್ಟಿ ಮುಖ್ಯಭೂಮಿಕೆಯ ‘ಕಾಂತಾರ: ಚಾಪ್ಟರ್​ 1’ ಆರಂಭಿಕ ವಾರಾಂತ್ಯದಲ್ಲಿ ಭರ್ಜರಿ ಕಲೆಕ್ಷನ್​ ಮಾಡಿದೆ. ಎಲ್ಲಾ ಪ್ರಮುಖ ಭಾಷೆಗಳಲ್ಲಿ ಅತ್ಯುತ್ತಮ ಅಂಕಿ-ಅಂಶಗಳೊಂದಿಗೆ ಬಾಕ್ಸ್ ಆಫೀಸ್‌ ಪ್ರಯಾಣ ಮುಂದುವರಿಸಿದೆ. 2022ರಲ್ಲಿ ಬಿಡುಗಡೆಯಾದ ‘ಕಾಂತಾರ’ ಚಿತ್ರದ ಬ್ಲಾಕ್‌ಬಸ್ಟರ್ ಹಿಟ್ ನಂತರ ರಿಷಬ್​ ಶೆಟ್ಟಿ ರಚಿಸಿದ ಪ್ರೀಕ್ವೆಲ್​​ ಸಿನಿಪ್ರಿಯರಿಗೆ ಅದ್ಭುತ ಸಿನಿಮೀಯ ಅನುಭವ ಒದಗಿಸುತ್ತಿದೆ.

ಕಾಂತಾರ ಪ್ರೀಕ್ವೆಲ್​ ಬಾಕ್ಸ್​ ಆಫೀಸ್​ ಕಲೆಕ್ಷನ್​: ಸಿನಿಮಾ ಟ್ರೇಡ್ ಪೋರ್ಟಲ್ ಸ್ಯಾಕ್ನಿಲ್ಕ್ ಪ್ರಕಾರ, ಶನಿವಾರ ಭಾರತದಲ್ಲಿ 55 ಕೋಟಿ ರೂ. ನೆಟ್​ ಕಲೆಕ್ಷನ್​ ಮಾಡಿದ್ದ ಚಿತ್ರ, ಭಾನುವಾರ 61.5 ಕೋಟಿ ರೂಪಾಯಿಯ (ಆರಂಭಿಕ ಅಂದಾಜು) ವ್ಯವಹಾರ ನಡೆಸಿದೆ. ಶನಿವಾರಕ್ಕಿಂತ ಶೇ.11.82ರಷ್ಟುr ಏರಿಕೆ ಕಂಡಿದೆ.

ಬಹುಭಾಷೆಗಳಲ್ಲಿ ಬಿಡುಗಡೆ ಆಗಿರುವ ಚಿತ್ರ ಭಾನುವಾರ ಕನ್ನಡದಲ್ಲಿ 15.5 ಕೋಟಿ ರೂಪಾಯಿ, ತೆಲುಗಿನಲ್ಲಿ 11.25, ಹಿಂದಿಯಲ್ಲಿ 23.5, ತಮಿಳಿನಲ್ಲಿ 6.5, ಮಲಯಾಳಂನಲ್ಲಿ 4.75 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದೆ.

ಚಿತ್ರ ತೆರೆಕಂಡ ದಿನ 61.85 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿತ್ತು. ಕನ್ನಡದಲ್ಲಿ 19.6 ಕೋಟಿ ರೂಪಾಯಿ, ತೆಲುಗಿನಲ್ಲಿ 13 ಕೋಟಿ ರೂಪಾಯಿ, ಹಿಂದಿಯಲ್ಲಿ 18.5 ಕೋಟಿ ರೂಪಾಯಿ, ತಮಿಳಿನಲ್ಲಿ 5.5 ಕೋಟಿ ರೂಪಾಯಿ ಮತ್ತು ಮಲಯಾಳಂನಲ್ಲಿ 5.25 ಕೋಟಿ ರೂಪಾಯಿಯ ವ್ಯವಹಾರ ನಡೆಸಿತ್ತು. ನಂತರ, ಎರಡನೇ ದಿನ 46 ಕೋಟಿ ರೂಪಾಯಿ, ಮೂರನೇ ದಿನ (ಶನಿವಾರ) 55 ಕೋಟಿ ರೂ. ಗಳಿಸಿದೆ.

ದಿನ ಇಂಡಿಯಾ ನೆಟ್​ ಕಲೆಕ್ಷನ್​
ಮೊದಲ ದಿನ (ಗುರುವಾರ) 61.85 ಕೋಟಿ ರೂಪಾಯಿ.
ಎರಡನೇ ದಿನ (ಶುಕ್ರವಾರ) 45.4 ಕೋಟಿ ರೂಪಾಯಿ.
ಮೂರನೇ ದಿನ (ಶನಿವಾರ) 55 ಕೋಟಿ ರೂಪಾಯಿ.
ನಾಲ್ಕನೇ ದಿನ (ಭಾನುವಾರ) 61.5 ಕೋಟಿ ರೂಪಾಯಿ.
ಒಟ್ಟು 223.75 ಕೋಟಿ ರೂಪಾಯಿ

ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ವರದಿ ಪ್ರಕಾರ, ರಿಷಬ್​ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ಈ ಚಿತ್ರ ಮೊದಲ ದಿನವೇ ಜಾಗತಿಕವಾಗಿ 87.75 ಕೋಟಿ ರೂ. ಕಲೆಕ್ಷನ್​ ಮಾಡಿತ್ತು. ಈ ಮೂಲಕ ಕೆಜಿಎಫ್: ಅಧ್ಯಾಯ 2ರ ನಂತರ ಕನ್ನಡ ಚಿತ್ರವೊಂದು ಮೊದಲ ದಿನ ಅತಿ ಹೆಚ್ಚು ಕಲೆಕ್ಷನ್​ ಮಾಡಿದ ಸಿನಿಮಾವಾಗಿದೆ. ಅಲ್ಲದೇ, ಕಾಂತಾರ ಚಾಪ್ಟರ್​ 1 ಮೂರೇ ದಿನಗಳಲ್ಲಿ ಗ್ಲೋಬಲಿ 235 ಕೋಟಿ ಕಲೆಕ್ಷನ್​ ಮಾಡಿದೆ.

ಡಿವೈನ್​ ಸ್ಟಾರ್​ ರಿಷಬ್​ ಶೆಟ್ಟಿ ರಚಿಸಿ, ನಟಿಸಿ, ನಿರ್ದೇಶಿಸಿರುವ ಈ ಪ್ರಾಜೆಕ್ಟ್​​ನಲ್ಲಿ ರುಕ್ಮಿಣಿ ವಸಂತ್, ಗುಲ್ಶನ್ ದೇವಯ್ಯ, ಜಯರಾಮ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಹೊಂಬಾಳೆ ಫಿಲ್ಮ್ಸ್​ ಬಿಗ್​ ಬಜೆಟ್​ನಲ್ಲಿ ನಿರ್ಮಿಸಿದ್ದು, ಅಜನೀಶ್ ಲೋಕನಾಥ್ ಸಂಗೀತ ಮತ್ತು ಅರವಿಂದ್ ಕಶ್ಯಪ್ ಅವರ ಛಾಯಾಗ್ರಹಣವಿದೆ.