ಡೈಲಿ ವಾರ್ತೆ: 19/ಅ./2025

ಅಂಕೋಲಾ|ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿ ಬಿದ್ದ ಸಾರಿಗೆ ಬಸ್ – 49 ಪ್ರಯಾಣಿಕರಿಗೆ ಗಾಯ

ಅಂಕೋಲಾ: ಸಾರಿಗೆ ಸಂಸ್ಥೆಯ ಬಸ್​​ವೊಂದು ಚಾಲಕನ ನಿಯಂತ್ರಣ ತಪ್ಪಿ ಮೂರು ಬಾರಿ ಪಲ್ಟಿಹೊಡೆದು ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ ಚಾಲಕ, ನಿರ್ವಾಹಕ ಸೇರಿ 49 ಪ್ರಯಾಣಿಕರು ಗಾಯಗೊಂಡಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದ ಘಟನೆ ಶನಿವಾರ ರಾತ್ರಿ ಅಂಕೋಲಾ ತಾಲೂಕಿನ ವಡ್ಡಿ ಘಾಟ್ ತಿರುವಿನಲ್ಲಿ ಸಂಭವಿಸಿದೆ.

ಕುಮಟಾ-ಶಿರಸಿ ರಸ್ತೆ ಕಾಮಗಾರಿಯ ನಿಮಿತ್ತ ಸಂಚಾರ ಬಂದ್​​​ ಮಾಡಲಾಗಿದ್ದು, ಶಿರಸಿಗೆ ಪ್ರಯಾಣಿಸುವ ಬಸ್‌ ಮಾರ್ಗವನ್ನು ವಡ್ಡಿ ಮೂಲಕ ಸಂಚರಿಸುವಂತೆ ಬದಲಿಸಲಾಗಿತ್ತು. ರಾಜ್ಯ ಹೆದ್ದಾರಿಯಾದ ಇದರ ಘಟ್ಟದ ಪ್ರದೇಶದಲ್ಲಿ ಭಾರಿ ತಿರುವುಗಳಿದ್ದು, ತೀರಾ ಅಪಾಯಕಾರಿಯಾಗಿವೆ. ಈ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ, ಬಸ್ ಉರುಳಿ ಕಂದಕಕ್ಕೆ ಬಿದ್ದಿದೆ. ಈ ಸಂದರ್ಭದಲ್ಲಿ ಬಸ್​​ನಲ್ಲಿ ಒಟ್ಟು 49 ಮಂದಿ ಇದ್ದರು ಎಂದು ತಿಳಿದುಬಂದಿದೆ.

ಘಟನೆಯಲ್ಲಿ ಹಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸ್ಥಳೀಯರ ನೆರವಿನಿಂದ ಅವರನ್ನು ಮೆಲಕ್ಕೆತ್ತಿ ಖಾಸಗಿ ವಾಹನಗಳ ಮೂಲಕ ಅಂಕೋಲಾ ಮತ್ತು ಕುಮಟಾ ಆಸ್ಪತ್ರೆಗಳಿಗೆ ರವಾನಿಸಲಾಗಿದೆ. ಈ ಬಸ್ ಕುಮಟಾ ಘಟಕಕ್ಕೆ ಸೇರಿದೆ. ಬಳ್ಳಾರಿಯಿಂದ ಕುಮಟಾ ಕಡೆಗೆ ತೆರಳುತ್ತಿತ್ತು. ಘಟನಾ ಸ್ಥಳಕ್ಕೆ ಅಂಕೋಲಾ ಪೊಲೀಸರು ಹಾಗೂ ಸಾರಿಗೆ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.