ಡೈಲಿ ವಾರ್ತೆ: 28/ಅ./2025

ಮಕ್ಕಳಿಗೆ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ತಾಯಿ!

ಕೊಪ್ಪಳ: ಇಬ್ಬರು ಮಕ್ಕಳೊಂದಿಗೆ ತಾಯಿ ನೇಣಿಗೆ ಶರಣಾದ ಘಟನೆ ಕುಕನೂರು ತಾಲೂಕಿನ ಬೆಣಕಲ್ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಲಕ್ಷ್ಮವ್ವ ಹನುಮಪ್ಪ ಭಜಂತ್ರಿ (30) ಮಕ್ಕಳಾದ ರಮೇಶ (4) ಹಾಗೂ ಜಾನ್ವಿ (2) ಶವಗಳು ಮನಯಲ್ಲೇ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿವೆ.

ಮಹಿಳೆ ತನ್ನಿಬ್ಬರು ಮಕ್ಕಳಿಗೆ ಮೊದಲು ನೇಣು ಹಾಕಿ ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಸಾವಿಗೆ ಕಾರಣ ತಿಳಿದು ಬಂದಿಲ್ಲ.

ಲಕ್ಷ್ಮವ್ವ ಗಂಡ ಹಾಗೂ ಅತ್ತೆ ಕೆಲಸಕ್ಕೆ ಹೋಗಿದ್ದರು. ಈ ವೇಳೆ ಮಹಿಳೆ ನೇಣಿಗೆ ಶರಣಾಗಿದ್ದಾಳೆ. ಕಳೆದ 2016 ರಲ್ಲಿ ಲಕ್ಷ್ಮವ್ವ ಮದುವೆ ಆಗಿತ್ತು ಎಂದು ತಿಳಿದು ಬಂದಿದೆ.

ಡೆತ್ ನೋಟ್ ಪತ್ತೆ?
ಮೃತ ಮಹಿಳೆಯ ಕೈ ಬಳೆಯಲ್ಲಿ ಚೀಟಿಯೊಂದು ಪತ್ತೆಯಾಗಿದ್ದು, ಸಾವಿಗೆ ಕಾರಣ ಬರೆದು ಆತ್ಮಹತ್ಯೆ ಮಾಡಿಕೊಂಡಿರಬೇಕು ಎಂದು ಶಂಕಿಸಲಾಗಿದೆ.

ಮೃತ ಮಹಿಳೆ ಕೂಲಿ ಕೆಲಸ ಮಾಡುತ್ತಿದ್ದು, ಆಕೆಯ ಪತಿ ಕಟ್ಟಡ ಕಾರ್ಮಿಕನಾಗಿದ್ದಾನೆ. ಲಕ್ಷ್ಮವ್ವರ ಗಂಡ ಮೂಲತಃ ಕೊಪ್ಪಳ ತಾಲೂಕು ಕರ್ಕಿಹಳ್ಳಿ ಗ್ರಾಮದವರಾಗಿದ್ದು, ಪತ್ನಿ ಮನೆಯಲ್ಲೇ ಬಂದು ವಾಸವಾಗಿದ್ದ. ನಮ್ಮಲ್ಲಿ ಯಾವುದೇ ಜಗಳ ಇರಲಿಲ್ಲ. ಯಾವುದೇ ತೊಂದರೆ ಇರಲಿಲ್ಲ ಎಂದು ಪತಿ ಹನುಮಂತಪ್ಪ ಪ್ರತಿಕ್ರಿಯಿಸಿದ್ದಾರೆ.

ಘಟನಾ ಸ್ಥಳಕ್ಕೆ ಕೊಪ್ಪಳ ಎಸ್ ಡಾ.ರಾಮ್ ಎಲ್ ಅರಸಿದ್ದಿ ಭೇಟಿ ನೀಡಿ, ಪರಿಶೀಲನೆ‌ ನಡೆಸಿದ್ದಾರೆ.