ಡೈಲಿ ವಾರ್ತೆ: 23/DEC/2025

ತೆಕ್ಕಟ್ಟೆ| ಅಪಘಾತ ಪ್ರಕರಣ: ಆರೋಪಿ ಕಾರು ಚಾಲಕನಿಗೆ ಜೈಲುಶಿಕ್ಷೆ

ಕುಂದಾಪುರ: ಫಾರ್ಚ್ಯುನರ್ ಕಾರು ಮತ್ತು ವ್ಯಾಗನಾರ್ ಕಾರುಗಳ ನಡೆವೆ ಡಿಕ್ಕಿ ಸಂಭವಿಸಿ ಓರ್ವ ಮೃತಪಟ್ಟ ಅಪಘಾತ ಘಟನೆಗೆ ಸಂಬಂಧಿಸಿದಂತೆ ಕುಂದಾಪುರ ನ್ಯಾಯಾಲಯ ತಪ್ಪಿತಸ್ಥ ಕಾರು ಚಾಲಕನಿಗೆ ಶಿಕ್ಷೆ ವಿಧಿಸಿದೆ.

ಪುಣೆಯಿಂದ ಉಡುಪಿ ಕಡೆಗೆ ಸಾಗುತ್ತಿದ್ದ ಫಾರ್ಚ್ಯುನರ್ ಕಾರಿಗೆ ಹೆದ್ದಾರಿಯ ಇನ್ನೊಂದು ಕಡೆಯಿಂದ ಬರುತ್ತಿದ್ದ ವ್ಯಾಗನಾರ್ ಕಾರು ಡಿಕ್ಕಿ ಹೊಡೆದಿತ್ತು. 2017 ರ ಜನವರಿ 8 ರಂದು ಬೆಳಿಗ್ಗೆ ತೆಕ್ಕಟ್ಟೆಯ ಶ್ರೀ ರಾಘವೇಂದ್ರ ಸ್ವಾಮಿ ಮಠದ ಎದುರು ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಅಪಘಾತ ನಡೆದಿತ್ತು. ಉಡುಪಿ ಕಡೆಯಿಂದ ಕುಂದಾಪುರ ಕಡೆಗೆ ಬರುತ್ತಿದ್ದ ಕೇರಳ ರಾಜ್ಯ ನೋಂದಣಿ ಸಂಖ್ಯೆ ಹೊಂದಿದ್ದ ವ್ಯಾಗನಾರ್ ಕಾರು ಹೆದ್ದಾರಿಯ ಡಿವೈಡರ್ ಏರಿ ಈಚೆ ಬಂದು ಡಿಕ್ಕಿ ಹೊಡೆದಿತ್ತು. ಈ ಅಪಘಾತದಲ್ಲಿ ಫಾರ್ಚ್ಯುನರ್ ಕಾರು ಚಲಾಯಿಸುತ್ತಿದ್ದ ದಾದಾ ಸಾಹೇಬ್ ಕೋರ್ಕೆ, ಕಾರಿನಲ್ಲಿದ್ದ ಸುಮಿತ್ ದುಮಾಲ್ ಮತ್ತು ಪ್ರಮೋದ್ ಮಾನೆ ಎಂಬವರಿಗೆ ಗಾಯಗಳಾಗಿದ್ದು, ವ್ಯಾಗನಾರ್ ಕಾರಿನಲ್ಲಿದ್ದ ಓರ್ವ ಅಸುನೀಗಿದ್ದರು. ಎರಡೂ ಕಾರುಗಳು ಜಖಂಗೊಂಡಿದ್ದವು.

ಕೋಟ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಬ್ರಹ್ಮಾವರ ಪೊಲೀಸ್ ವೃತ್ತ ನಿರೀಕ್ಷಕ ಶ್ರೀಕಾಂತ ತನಿಖೆ ನಡೆಸಿ ವ್ಯಾಗನಾರ್ ಕಾರು ಚಾಲಕ ಪ್ರಮೋದ್ ಮುದ್ಗಾಂತ ರಾಮಲ್ ಎಂಬಾತನ ವಿರುದ್ಧ ಕುಂದಾಪುರ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ವೇಳೆ ಆರೋಪಿ ವ್ಯಾಗನಾರ್ ಕಾರು ಚಾಲಕ ಪ್ರಮೋದ್ ಮುದ್ಗಾಂತ ರಾಮಲ್ ದೋಷಿ ಎಂದು ಸಾಬೀತಾಗಿದ್ದು, ನ್ಯಾಯಾಧೀಶೆ ಶ್ರುತಿಶ್ರೀ ಆತನಿಗೆ ಆರು ತಿಂಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಈ ಪ್ರಕರಣದಲ್ಲಿ ಸರ್ಕಾರದ ಪರ ಸರ್ಕಾರಿ ಅಭಿಯೋಜಕಿ ಉಮಾ ದಾಮೋದರ ನಾಯ್ಕ್ ವಾದಿಸಿದ್ದರು.