
ಡೈಲಿ ವಾರ್ತೆ: 28/DEC/2025
ಮಂಗಳೂರು| ಮನೆಯಲ್ಲೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಪಾಂಡೇಶ್ವರ ಠಾಣೆ ಎಎಸ್‌ಐ

ಮಂಗಳೂರು: ನಗರದ ಪಾಂಡೇಶ್ವರ ಠಾಣೆಯ ಎಎಸ್‌ಐ ಒಬ್ಬರು ಕದ್ರಿ ವ್ಯಾಸನಗರದ ಮನೆಯಲ್ಲಿ ಆತ್ಮ ಹತ್ಯೆಗೆ ಯತ್ನಿಸಿದ ಘಟನೆ ಭಾನುವಾರ ನಡೆದಿದೆ.
ಪಾಂಡೇಶ್ವರ ಠಾಣೆಯ ಎಎಸ್‌ಐ ಹರಿಶ್ಚಂದ್ರ ಬೇರಿಕೆ ಆತ್ಮಹತ್ಯೆಗೆ ಯತ್ನಿಸಿದವರು. ಮೈಗೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿ ಆತ್ಮಹತ್ಯೆಗೆ ಯತ್ನಿಸಿದಂತೆ ಕಂಡು ಬಂದಿದೆ
ಹರಿಶ್ಚಂದ್ರ ಕೇರಳದ ಕಾಸರಗೋಡು ಜಿಲ್ಲೆಯ ಮುಳ್ಳೇರಿಯಾ ಮೂಲದವರು. ರಜೆ ಹಿನ್ನೆಲೆಯಲ್ಲಿ ಪತ್ನಿ ಮಕ್ಕಳು ಊರಿಗೆ ತೆರಳಿದ್ದರು ಎಂದು ತಿಳಿದು ಬಂದಿದೆ.
ಬೆಳಗ್ಗೆ ದೇವರಿಗೆ ಇಡಲೆಂದು ಗಿಡದಿಂದ ಹೂವುಗಳನ್ನು ಕೊಯ್ಯುತ್ತಿದ್ದುದನ್ನು ನೋಡಿರುವುದಾಗಿ ಸ್ಥಳೀಯರು ಹೇಳಿದ್ದಾರೆ. ಬೆಳಗ್ಗೆ 10.30ರ ವೇಳೆಗೆ ಬೊಬ್ಬೆ ಕೇಳಿದ್ದು, ಅಕ್ಕಪಕ್ಕದವರು ಹೋದಾಗ ಮನೆ ಎದುರು ಬೆಂಕಿ ಹಚ್ಚಿಕೊಂಡಿರುವ ಸ್ಥಿತಿಯಲ್ಲಿ ಕಂಡು ಬಂದಿದ್ದಾರೆ. ಕೂಡಲೇ ನೀರು ಹಾಕಿ ಬೆಂಕಿ ನಂದಿಸಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಆತ್ಮ ಹತ್ಯೆಗೆ ಯತ್ನಿಸಲು ನಿಖರ ಕಾರಣ ಏನು ಎಂದು ತಿಳಿದು ಬಂದಿಲ್ಲ. ಸ್ಥಳಕ್ಕೆ ಕದ್ರಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.