

ಡೈಲಿ ವಾರ್ತೆ: 30/DEC/2025
ಕೋಟೇಶ್ವರ| ಸಹನಾ ಕನ್ವೆನ್ಸನ್ ಸೆಂಟರ್‌ನಲ್ಲಿ ವೈಭವದ ಶ್ರೀನಿವಾಸ ಕಲ್ಯಾಣೋತ್ಸವ ಸಂಪನ್ನ

ಕುಂದಾಪುರ: ತಿರುಮಲ ತಿರುಪತಿ ದೇವಸ್ಥಾನ ಸಮಿತಿ ಹಾಗೂ ಕೋಟೇಶ್ವರದ ಸಹನಾ ಸಮೂಹ ಸಂಸ್ಥೆಯ ಆಡಳಿತ ನಿರ್ದೇಶಕ ಸುರೇಂದ್ರ ಶೆಟ್ಟಿ ಹಾಗೂ ಕುಟುಂಬದ ನೇತೃತ್ವದಲ್ಲಿ ಲೋಕ ಕಲ್ಯಾಣಾರ್ಥ ಅಂಕದಕಟ್ಟೆಯ ಸಹನಾ ಕನ್ವೆನ್ಸನ್ ಸೆಂಟರ್‌ನಲ್ಲಿ ನಡೆದ ಶ್ರೀನಿವಾಸ ಕಲ್ಯಾಣೋತ್ಸವವು ಭಾನುವಾರ ರಾತ್ರಿ ಯಶ್ವಸಿಯಾಗಿ ಸಂಪನ್ನಗೊಂಡಿತು.

ತಿರುಪತಿಯ ವೇ।ಮೂ। ಬಾಲಾಜಿ ಆಚಾರ್ಯರ ನೇತೃತ್ವದಲ್ಲಿ ವೈದಿಕ ವೃಂದದಿಂದ ಸಂಜೆ 5.50 ರಿಂದ ಆರಂಭಗೊಂಡ ಧಾರ್ಮಿಕ ವಿಧಿ-ವಿಧಾನ, ಪ್ರವೇಶ, ಕಲ್ಯಾಣೋತ್ಸವ, ಮಂಗಳಾಚರಣೆ, ಮಹಾಪ್ರಸನ್ನ ಪೂಜೆಯು ರಾತ್ರಿ 10.30ಕ್ಕೆ ಮುಕ್ತಾಯಗೊಂಡಿತು.

ಆರಂಭದಲ್ಲಿ ಕಾರ್ಕಳದ ಶ್ರೀ ವೆಂಕಟರಮಣ ದೇವಸ್ಥಾನದ ಭಜನ ತಂಡದಿಂದ ಭಜನೆ, ಬಳಿಕ ತಿರುಪತಿ ದೇವಸ್ಥಾನದ ಭಜನ ತಂಡದಿಂದ ಭಜನೆ, ತಮಿಳುನಾಡಿನ ತಂಡದಿಂದವಾದ್ಯಗೋಷ್ಠಿ ನೆರವೇರಿತು.


ಕಾರ್ಯಕ್ರಮಕ್ಕೆ ಸೇರಿದ್ದ ಸಹಸ್ರಾರು ಸಂಖ್ಯೆಯ ಭಕ್ತರು ಎರಡೂ ಕೈಗಳನ್ನು ಮೇಲೇತ್ತಿ, ಗೋವಿಂದ.. ಗೋವಿಂದ.. ಹಾಡಿಗೆ ಕುಣಿದು, ಭಕ್ತಿ-ಭಾವದಲ್ಲಿ ಮಿಂದೆದ್ದರು.
ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ, ಸಹನಾ ಸಮೂಹ ಸಂಸ್ಥೆಗಳ
ಆಡಳಿತ ನಿರ್ದೇಶಕ ಸುರೇಂದ್ರ ಶೆಟ್ಟಿ ಸಹನಾ ಸುರೇಂದ್ರ ಶೆಟ್ಟಿ ಮಕ್ಕಳಾದ ಸುಮುಖ ಎಸ್. ಶೆಟ್ಟಿ ಸುಮೇಧಾ ಎಸ್. ಶೆಟ್ಟಿ ಮನೆಯವರು, ಕುಟುಂಬಸ್ಥರು, ಹಲವು ಗಣ್ಯರು ಉಪಸ್ಥಿತರಿದ್ದರು.
ಕೋಟೇಶ್ವರ ಭಾಗದಲ್ಲಿ ನಡೆದ ಈ ಶ್ರೀನಿವಾಸ ಕಲ್ಯಾಣೋತ್ಸವವನ್ನು ಕಣ್ಣುಂಬಿಕೊಳ್ಳಲು ಕುಂದಾಪುರ, ಕೋಟೇಶ್ವರ, ಕೋಣಿ, ಬಸ್ರೂರು, ತಲ್ಲೂರು, ಹೆಮ್ಮಾಡಿ ಸಹಿತ ವಿವಿಧೆಡೆಗಳಿಂದ ಸುಮಾರು 22 ಸಾವಿರಕ್ಕೂ ಮಿಕ್ಕಿ ಮಂದಿ ಆಗಮಿಸಿದ್ದರು. ಆರಂಭದಿಂದ ಕಲ್ಯಾಣೋತ್ಸವ ಮುಗಿಯುವರೆಗೂ ಕುಳಿತಲ್ಲಿಂದ ಎದ್ದೇಳದೆ, ಶ್ರೀನಿವಾಸ ದೇವರ ವಿವಾಹ ಮಹೋತ್ಸವವನ್ನು ಕಣ್ಣುಂಬಿಕೊಂಡರು. ಆಗಮಿಸಿದಂತಹ ಎಲ್ಲ ಭಕ್ತರಿಗೂ ವ್ಯವಸ್ಥಿತ ರೀತಿಯಲ್ಲಿ ತಿರುಪತಿಯಿಂದ ತಂದಿರುವ ಪ್ರಸಾದವನ್ನು ವಿತರಿಸಲಾಯಿತು.
ಶ್ರೀನಿವಾಸ ಕಲ್ಯಾಣೋತ್ಸವದ ಸೇವಾಕರ್ತರಾದ ಸುರೇಂದ್ರ ಶೆಟ್ಟರ ಮಾರ್ಗದರ್ಶನದಲ್ಲಿ 1,300 ಕ್ಕೂ ಮಿಕ್ಕಿ ಸ್ವಯಂಸೇವಕರು ಅವಿರತವಾಗಿ ಸೇವೆ ಸಲ್ಲಿಸಿ, ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದರು. ಸೇವಾಕರ್ತರ ಸಮಿತಿಯಲ್ಲಿ ಚಂದ್ರಶೇಖರ್ ಬೀಜಾಡಿ, ಲೋಕೇಶ್ ಅಂಕದಕಟ್ಟೆ ಜಯರಾಮ ಶೆಟ್ಟಿ ಶಂಕರ ಶೆಟ್ಟಿ, ಬಾಬಣ್ಣ, ಸಹನಾದ ಪ್ರಮುಖರಾದ ಮಂಜುನಾಥ ಭಂಡಾರಿ, ಹರ್ಷ ಅಮೀನ್ ಮತ್ತಿತರರು ಸಹಕರಿಸಿದರು.
ಪೊಲೀಸ್ ಭದ್ರತೆ
ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ, ವಾಹನಗಳ ಸುಗಮ ಸಂಚಾರ, ಪಾರ್ಕಿಂಗ್, ಸುವ್ಯವಸ್ಥಿತ ರೀತಿಯ ಕಾರ್ಯಕ್ರಮ ಆಯೋಜನೆಗಾಗಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಕುಂದಾಪುರ ಡಿವೈಎಸ್ಪಿ ಎಚ್. ಡಿ. ಕುಲಕರ್ಣಿ ಮಾರ್ಗ ದರ್ಶನದಲ್ಲಿ ಕುಂದಾಪುರ ವೃತ್ತ ನಿರೀಕ್ಷಕ ಜಯರಾಮ ಗೌಡ ನೇತೃತ್ವದಲ್ಲಿ ವಿವಿಧ ಠಾಣೆಗಳ ಪಿಎಸ್‌ಐಗಳು, ಸಿಬಂದಿ ಭದ್ರತಾ ಕಾರ್ಯನಿರ್ವಹಿಸಿದರು.