ಡೈಲಿ ವಾರ್ತೆ: 30/DEC/2025

ಯುವತಿಗೆ ಮಗು ಕರುಣಿಸಿ ಕೈ ಕೊಟ್ಟ ಪ್ರಕರಣ – ಶಿಶು ಜನಿಸಿ 6 ತಿಂಗಳಾದರೂ ದೊರಕದ ನ್ಯಾಯ, ಪ್ರಮುಖ ಬಿಜೆಪಿ ನಾಯಕರ ಸಂಧಾನ ವಿಫಲ

ಮಂಗಳೂರು, ಡಿಸೆಂಬರ್ 30: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಬಿಜೆಪಿ ಮುಖಂಡ ಜಗನ್ನಿವಾಸ್ ರಾವ್ ಪುತ್ರ ಕೃಷ್ಣ ಜೆ.ರಾವ್ ಯುವತಿಯೊಬ್ಬಳನ್ನು ಪ್ರೀತಿಸಿ, ಮದುವೆಯಾಗುವುದಾಗಿ ನಂಬಿಸಿ ಗರ್ಭವತಿಯನ್ನಾಗಿ ಮಾಡಿದ್ದ ಪ್ರಕರಣ ಈಗ ಮತ್ತಷ್ಟು ಜಟಿಲಗೊಂಡಿದೆ.

ಸಂತ್ರಸ್ತೆಯು ಮಗುವಿಗೆ ಜನ್ಮ ನೀಡಿ ತಿಂಗಳುಗಳೇ ಕಳೆದರೂ ಸಮಸ್ಯೆ ಬಗೆಹರಿಯುವ ಲಕ್ಷಣ ಕಾಣಿಸುತ್ತಿಲ್ಲ. ನ್ಯಾಯಾಲಯದ ನಿರ್ದೇಶನದಂತೆ ಡಿಎನ್​​ಎ ಟೆಸ್ಟ್ ಮಾಡಿ, ಕೃಷ್ಣ ಜೆ.ರಾವ್ ಮಗುವಿನ ತಂದೆ ಎಂಬುದು ಸಾಬೀತಾದರೂ ಆತ ಯುವತಿಯನ್ನು ಮದುವೆಯಾಗಲು ನಿರಾಕರಿಸಿದ್ದಾನೆ. ಬಿಜೆಪಿಯ ಪ್ರಮುಖ ನಾಯಕರು, ಆರ್​​ಎಸ್​ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್​ ಸೇರಿ ಅನೇಕರು ಸಂಧಾನಕ್ಕೆ ಯತ್ನಿಸಿದ್ದರೂ ವಿಫಲವಾಗಿದೆ. ಪರಿಣಾಮವಾಗಿ ಕಾನೂನು ಹೋರಾಟವೊಂದೇ ನಮಗೆ ಉಳಿದಿರುವ ದಾರಿ ಎಂದು ಸಂತ್ರಸ್ತೆಯ ಕುಟುಂಬ ಹೇಳಿಕೊಂಡಿದೆ.

ಪುತ್ತೂರಿನ ಬಿಜೆಪಿ ಮುಖಂಡ ಜಗನ್ನಿವಾಸ್ ರಾವ್ ಅವರ ಪುತ್ರ ಕೃಷ್ಣ ಜೆ.ರಾವ್, ಶಾಲಾ ದಿನಗಳಿಂದ ಪರಿಚಿತವಾಗಿದ್ದ ಹಿಂದೂ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ನಂತರ ವಂಚಿಸಿದ್ದಾನೆ ಎಂಬ ಆರೋಪ ಸುಮಾರು 7-8 ತಿಂಗಳುಗಳ ಹಿಂದೆ ಕೇಳಿಬಂದಿತ್ತು. ಗರ್ಭವತಿಯಾಗಿದ್ದ ಯುವತಿಯನ್ನು ಮದುವೆಯಾಗುವಂತೆ ಸಂಧಾನ ಮಾಡಿಸಲಾಗಿತ್ತು. ಆರಂಭದಲ್ಲಿ ಮದುವೆಯಾಗಲು ನಿರಾಕರಿಸಿದ್ದ ಆತ ಕೊನೆಗೆ ಒತ್ತಾಯದ ಮೇರೆಗೆ ಒಪ್ಪಿದ್ದ. ಆದರೆ, ಆತನಿಗೆ 21 ವರ್ಷ ವಯಸ್ಸು ಪೂರ್ಣವಾಗದ ಕಾರಣ, ಆದ ನಂತರ ಮದುವೆ ಮಾಡುವುದಾಗಿ ಆತನ ತಂದೆ ಜಗನ್ನಿವಾಸ ರಾವ್ ಭರವಸೆ ನೀಡಿದ್ದರು. ಆದರೆ, ಮಗು ಜನಿಸುತ್ತಿದ್ದಂತೆಯೇ ಕೃಷ್ಣ ರಾವ್ ಗೆ 21 ವರ್ಷ ವಯಸ್ಸು ಪೂರ್ಣಗೊಂಡಿತ್ತು ಮದುವೆಗೆ ನಿರಾಕರಿಸಿದ್ದ. ನಂತರ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಬಳಿಕ ಬಂಧನಕ್ಕೊಳಗಾಗಿದ್ದ ಕೃಷ್ಣ ರಾವ್ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. ಯುವತಿಗೆ ಹೆರಿಗೆಯಾದ ನಂತರ ‘ಮಗು ನನ್ನದಲ್ಲ’ ಎಂದು ಕೃಷ್ಣ ರಾವ್ ಹೇಳಿದ್ದರಿಂದ ನ್ಯಾಯಾಲಯದ ಆದೇಶದಂತೆ ಡಿಎನ್‌ಎ ಪರೀಕ್ಷೆ ನಡೆಸಲಾಗಿತ್ತು. ಆರೋಪಿ, ಸಂತ್ರಸ್ತೆ ಹಾಗೂ ಮಗುವಿನ ರಕ್ತ ಮಾದರಿಗಳನ್ನು ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಪರೀಕ್ಷೆಯಲ್ಲಿ ಕೃಷ್ಣ ಜೆ.ರಾವ್ ಮಗುವಿನ ತಂದೆ ಎಂಬುದು ದೃಢಪಟ್ಟಿತ್ತು.

ಪ್ರಕರಣ ರಾಜ್ಯಾದ್ಯಂತ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಬಳಿಕ ಬಿಜೆಪಿಯು ಆರೋಪಿಯ ತಂದೆ ಜಗನ್ನಿವಾಸ್ ರಾವ್ ಅವರನ್ನು ಪಕ್ಷದಿಂದ ಉಚ್ಚಾಟಿಸಿತ್ತು.

ಡಿಎನ್​ಎ ಪಾಸಿಟಿವ್ ಬಂದರೂ ಮದುವೆಯಾಗಲೊಪ್ಪದ ಆರೋಪಿ:
ಡಿಎನ್‌ಎ ವರದಿ ಪಾಸಿಟಿವ್ ಬಂದ ಬಳಿಕವೂ ಆರೋಪಿ ಹಾಗೂ ಆತನ ಕುಟುಂಬ ಮದುವೆಗೆ ನಿರಾಕರಿಸಿದ್ದಾರೆ ಎಂಬ ಆರೋಪ ಸಂತ್ರಸ್ತೆಯ ಕುಟುಂಬದಿಂದ ಕೇಳಿಬಂದಿದೆ. ಕಳೆದ ಮೂರು ತಿಂಗಳಿನಿಂದ ಆರ್​ಎಸ್​ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ವಿಶ್ವಕರ್ಮ ಮಹಾಸಭಾ ರಾಜ್ಯಾಧ್ಯಕ್ಷ ಕೆ.ಪಿ.ನಂಜುಂಡಿ ಅವರ ನೇತೃತ್ವದಲ್ಲಿ ಹಲವು ಬಾರಿ ಸಂಧಾನ ಮಾತುಕತೆ ನಡೆದರೂ ಯಾವುದೇ ಫಲಿತಾಂಶ ಕಂಡುಬಂದಿಲ್ಲ.

ಈ ಹಿನ್ನೆಲೆಯಲ್ಲಿ ಸಂಧಾನ ಪ್ರಕ್ರಿಯೆ ಮುರಿದುಬಿದ್ದು, ಕಾನೂನಿನ ಮೂಲಕವೇ ನ್ಯಾಯ ಪಡೆಯಲು ಸಂತ್ರಸ್ತೆ ಮತ್ತು ಆಕೆಯ ಕುಟುಂಬ ನಿರ್ಧರಿಸಿದೆ. ಸದ್ಯ ಆರೋಪಿ ಕೃಷ್ಣ ಜೆ.ರಾವ್ ನ್ಯಾಯಾಂಗ ಬಂಧನ ಅನುಭವಿಸಿ ಜಾಮೀನಿನ ಮೇಲೆ ಹೊರಬಂದಿದ್ದಾನೆ.

ಮಗುವಿಗೆ ತಂದೆ, ನನಗೆ ಪತಿ ಸಿಕ್ಕರೆ ಸಾಕೆಂದ ಸಂತ್ರಸ್ತೆ:
ಮಗುವಿಗೆ ತಂದೆ ಮತ್ತು ನನಗೆ ಗಂಡ ಸಿಕ್ಕರೆ ಸಾಕು. ಮದುವೆಗೆ ಈಗಲೂ ಸಿದ್ಧಳಿದ್ದೇನೆ. ಆದರೆ ಸಂಧಾನ ವಿಫಲವಾಗಿದೆ. ಮುಂದೆ ಕೋರ್ಟ್ ನೀಡುವ ತೀರ್ಪನ್ನೇ ಸ್ವೀಕರಿಸುತ್ತೇವೆ ಎಂದು ಸಂತ್ರಸ್ತೆ ಮಾಧ್ಯಮದ ಮುಂದೆ ಪ್ರತಿಕ್ರಿಯಿಸಿದ್ದಾರೆ. ಸಂತ್ರಸ್ತೆಯ ತಾಯಿಯೂ, ‘ಹಣದ ಆಮಿಷ ತೋರಿಸಿದರು. ನ್ಯಾಯ ಸಿಗಲಿಲ್ಲ. ಈಗ ಕಾನೂನು ಹೋರಾಟವೇ ನಮ್ಮ ದಾರಿ’ ಎಂದು ಹೇಳಿದ್ದಾರೆ.

ಏತನ್ಮಧ್ಯೆ, ಪ್ರಕರಣದ ಬಗ್ಗೆ ವಿಶ್ವಕರ್ಮ ಮಹಾಸಭಾ ರಾಜ್ಯಾಧ್ಯಕ್ಷ ಕೆಪಿ ನಂಜುಂಡಿ ಪ್ರತಿಕ್ರಿಯಿಸಿದ್ದು, ಕೋರ್ಟ್ ಮೂಲಕ ಶಿಕ್ಷೆಯಾಗಬಾರದು. ಎರಡು ಕುಟುಂಬಗಳು ಒಂದಾಗಲಿ ಎಂದು ಸಂಧಾನ ಮಾಡಿದ್ದೆವು. ಯುವಕನ‌ ಮಮೆಯವರು ವಿಚಿತ್ರವಾದ ಬೇಡಿಕೆ ಇಡುತ್ತಿದ್ದಾರೆ. ಹೀಗಾಗಿ ಕಾನೂನು ಮೊರೆ ಹೋಗುವ ತೀರ್ಮಾನ ಆಗಿದೆ. ಕೋರ್ಟ್ ಮೂಲಕ ಸಿಗುವ ನ್ಯಾಯವನ್ನು ತಲೆಬಾಗಿ ಸ್ವೀಕರಿಸುತ್ತೇವೆ ಎಂದು ಹೇಳಿದ್ದಾರೆ.
ಹಿಂದುತ್ವದ ಶಕ್ತಿಯಾದ ಪುತ್ತೂರಿನಲ್ಲಿ ಬಡ ಹಿಂದೂ ಹೆಣ್ಣುಮಗುವಿಗೆ ನ್ಯಾಯಕೊಡಿಸಲು ಆಗಿಲ್ಲ ಎಂಬುದು ಆಶ್ಚರ್ಯವನ್ನುಂಟು ಮಾಡಿದೆ. ಬೇರೆ ಧರ್ಮದವರು ಹೀಗೆ ವಂಚನೆ ಮಾಡಿದ್ದರೆ ಮಂಗಳೂರು ಹೊತ್ತಿ ಉರಿದು ಹೋಗುತ್ತಿತ್ತು. ಮಗು ಜನಿಸಿ 6 ತಿಂಗಳಾದರೂ ಮಗುವಿಗೆ ಇನ್ನೂ ನಾಮಕರಣ ಆಗಿಲ್ಲ. ಸಂಧಾನದಲ್ಲಿ ನಾವು ಸೋತು ಹೋಗಿದ್ದೇವೆ. ಕಲ್ಲಡ್ಕ ಪ್ರಭಾಕರ್ ಭಟ್, ನಳಿನ್ ಕುಮಾರ್ ಕಟೀಲ್, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಸೇರಿ ಎಲ್ಲರೂ ಸಂಧಾನ ನಡೆಸಿದ್ದರು. ಆದರೂ ಪ್ರಯೋಜವಾಗಿಲ್ಲ ಎಂದು ಕೆಪಿ ನಂಜುಂಡಿ ಹೇಳಿದ್ದಾರೆ.