
ಡೈಲಿ ವಾರ್ತೆ:JAN/14/2026
ಮನೆಯಿಂದ ದೇವಸ್ಥಾನಕ್ಕೆ ಹೊರಟಿದ್ದ ಬಾಲಕ ಶವವಾಗಿ ಬಾವಿಯಲ್ಲಿ ಪತ್ತೆ – ದೇಹದಲ್ಲಿ ಗಾಯದ ಗುರುತು

ಬೆಳ್ತಂಗಡಿ,ಜ.14: ಗೇರುಕಟ್ಟೆ ಬಳಿಯ ಕುವೆಟ್ಟು ಪಂಚಾಯತ್ ಓಡಿಲ್ನಾಳ ಗ್ರಾಮದ ಬರಮೇಲು ಎಂಬಲ್ಲಿ ಬೆಳಗ್ಗೆ ದೇವಸ್ಥಾನಕ್ಕೆ ಹೊರಟಿದ್ದ ಬಾಲಕನೊಬ್ಬ ಶವವಾಗಿ ಕೆರೆಯಲ್ಲಿ ಪತ್ತೆಯಾದ ಘಟನೆ ನಡೆದಿದ್ದು ಬೆಳ್ತಂಗಡಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಬರಮೇಲು ನಿವಾಸಿ ಸುಬ್ರಹ್ಮಣ್ಯ ನಾಯಕ್ ಅವರ ಪುತ್ರ ಗೇರುಕಟ್ಟೆ ಸರ್ಕಾರಿ ಪ್ರೌಢ ಶಾಲೆಯ 9ನೇ ತರಗತಿ ವಿದ್ಯಾರ್ಥಿ ಸುಮಂತ್ (16) ಮೃತ ಬಾಲಕ.
ಸುಮಂತ್ ಪ್ರತಿ ವಾರ ಬೆಳಗ್ಗೆ ಬೇಗ ಎದ್ದು ದೇವಸ್ಥಾನಕ್ಕೆ ಹೋಗುವ ಪರಿಪಾಠ ಬೆಳೆಸಿಕೊಂಡಿದ್ದ. ಅದರಂತೆ, ಇಂದು ಬೆಳಗ್ಗೆ ಮನೆಯಿಂದ ಬೆಳಗ್ಗೆ 5 ಗಂಟೆಗೆ ದೇವಸ್ಥಾನಕ್ಕೆ ತೆರಳಿದ್ದ. ಆದರೆ ಆನಂತರ ಮನೆಗೆ ಹಿಂತಿರುಗದೇ ಇದ್ದಾಗ ಮನೆಯವರು ಹುಡುಕಾಡಿದ್ದು 500 ಮೀಟರ್ ದೂರದ ಬಾವಿಯಲ್ಲಿ ಶವ ಪತ್ತೆಯಾಗಿದೆ.
ಬಾಲಕನ ದೇಹದಲ್ಲಿ ಗಾಯದ ಗುರುತುಗಳಿದ್ದು ಇದು ಬಾವಿಗೆ ಬಿದ್ದ ಸಂದರ್ಭದಲ್ಲಿ ಆಗಿರುವ ಗಾಯಗಳೇ, ಯಾರಾದ್ರೂ ಹೊಡೆದು ಬಾವಿಗೆ ಹಾಕಿದ್ದಾರೆಯೇ ಎಂಬ ಸಂಶಯ ಸ್ಥಳೀಯ ಜನರಲ್ಲಿದೆ. ಸ್ಥಳಕ್ಕೆ ಎಸ್ಪಿ ಅರುಣ್ ಭೇಟಿ ನೀಡಿದ್ದು ಪೋಸ್ಟ್ ಮಾರ್ಟಂನಲ್ಲಿ ಗಾಯದ ಬಗ್ಗೆ ಮಾಹಿತಿ ಬರಲಿದ್ದು ತನಿಖೆ ನಡೆಸುತ್ತೇವೆ ಎಂದಿದ್ದಾರೆ.