ಡೈಲಿ ವಾರ್ತೆ:JAN/14/2026

SBI ಬ್ಯಾಂಕ್ನಿಂದ ಮೋಸ.?
ಚಿನ್ನ ಅಡವಿಟ್ಟಾಗ ಅಸಲಿ, ಬ್ಯಾಂಕ್​​ನಿಂದ ಬಿಡಿಸಿಕೊಂಡಾಗ ನಕಲಿ.!

ಬೆಂಗಳೂರು, ಜ. 14: ಇತ್ತೀಚೆಗೆ ಮೈಸೂರಿನಲ್ಲಿ ಕೆನರಾ ಬ್ಯಾಂಕ್​​ನಲ್ಲಿ ಗ್ರಾಹಕರು ಗಿರವಿ ಇಟ್ಟಿದ್ದ ಚಿನ್ನದಲ್ಲಿ ಮೋಸವೆಸಗಿದ್ದ ಆರೋಪ ಕೇಳಿಬಂದಿತ್ತು. ಇದೀಗ ಅಂತಹದ್ದೇ ಒಂದು ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಅಡವಿಟ್ಟು ಬಿಡಿಸಿಕೊಂಡಿದ್ದ ಚಿನ್ನದ ಚೈನ್​ ಪರಿಶೀಲಿಸಿದಾಗ ನಕಲಿ ಎಂಬುವುದು ಪತ್ತೆ ಆಗಿದೆ.
ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್​ನ ಎಸ್​​ಬಿಐ ಶಾಖೆಯಲ್ಲಿ ಘಟನೆ ನಡೆದಿದ್ದು, ದಂಪತಿ ಮೋಸ ಹೋಗಿದ್ದಾರೆ. ಸದ್ಯ ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

ನಡೆದ್ದಿದೇನು.?
ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್​ನ ಎಸ್​​ಬಿಐ ಶಾಖೆಯಲ್ಲಿ 1 ವರ್ಷದ ಹಿಂದೆ ಮುಕೇಶ್ ಮತ್ತು ಪೂರ್ಣಿಮಾ ದಂಪತಿ ಚಿನ್ನದ ಚೈನ್ ಬ್ಯಾಂಕ್​ನಲ್ಲಿ ಅಡವಿಟ್ಟು 2 ಲಕ್ಷ ರೂ ಪಡೆದಿದ್ದರು. ಅಸಲು, ಬಡ್ಡಿ ಸೇರಿ ಪ್ರತಿ ತಿಂಗಳು 11,700 ರೂ. ಪಾವತಿಸುತ್ತಿದ್ದರು. ನಿನ್ನೆ ಸಾಲದ ಮೊತ್ತ ಸಂಪೂರ್ಣ ಪಾವತಿಸಿ ಚೈನ್ ಬಿಡಿಸಿಕೊಂಡಿದ್ದರು.
ದುಡ್ಡಿನ ಅವಶ್ಯಕತೆ ಹಿನ್ನೆಲೆ ದಂಪತಿ ಮಾರ್ವಾಡಿ ಅಂಗಡಿಗೆ ತೆರಳಿದ್ದಾರೆ. ಅಲ್ಲಿ ಪರಿಶೀಲನೆ ಮಾಡಿ ನೋಡಿದಾಗ ಅದು ನಕಲಿ ಚಿನ್ನ ಎಂಬುವುದು ಪತ್ತೆ ಆಗಿದೆ. ಒಂದು ಕ್ಷಣ ಆತಂಕಕ್ಕೆ ಒಳಗಾದ ದಂಪತಿ, ಕೂಡಲೇ ಮಹಾಲಕ್ಷ್ಮೀ ಲೇಔಟ್​ನ ಎಸ್​​ಬಿಐ ಶಾಖೆಗೆ ತೆರಳಿದ್ದಾರೆ. ಈ ಬಗ್ಗೆ ಬ್ಯಾಂಕ್​ನಲ್ಲಿ ಪ್ರಶ್ನಿಸಿದಾಗ ಸಿಬ್ಬಂದಿ ದಂಪತಿ ಆರೋಪ ನಿರಾಕರಿಸಿದ್ದು, ಬೇಜವಾಬ್ದಾರಿ ಉತ್ತರ ನೀಡಿದ್ದಾರೆ. ಹೀಗಾಗಿ ಸದ್ಯ ದಂಪತಿ ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.