
ಡೈಲಿ ವಾರ್ತೆ:JAN/20/2026
ಚಿಕ್ಕಬಳ್ಳಾಪುರದಲ್ಲಿ ಭೀಕರ ಅಪಘಾತ: ಒಬ್ಬರು ಸಾವು, 11 ಮಂದಿ ಗಾಯ

ಚಿಕ್ಕಬಳ್ಳಾಪುರ, ಜ 19: ಮೈಸೂರಿನಿಂದ ಬೆಂಗಳೂರು ಮಾರ್ಗವಾಗಿ ಮಂತ್ರಾಲಯಕ್ಕೆ ತೆರಳುತ್ತಿದ್ದ ಸ್ವೀಪರ್ ಕೋಚ್ ಬಸ್ ಕಂಟೇನರ್ ಲಾರಿಗೆ ಡಿಕ್ಕಿ ಹೊಡೆದಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಅಗಲಗುರ್ಕಿ ಬಳಿ ಮಧ್ಯರಾತ್ರಿ ಒಂದು ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ.

ಅಪಘಾತದಲ್ಲಿ ಓರ್ವ ಸಾವನ್ನಪ್ಪಿದ್ದು, 11 ಮಂದಿ ಗಾಯಗೊಂಡಿದ್ದಾರೆ. 12 ಮಂದಿ ಗಾಯಾಳುಗಳನ್ನು ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಇಬ್ಬರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಬಿಹಾರ ಮೂಲದ 20 ವರ್ಷದ ಸುಹಾಸ್ ಎಂಬ ಯುವಕ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ. ಕಂಟೇನರ್ ವಾಹನದಲ್ಲಿ ತನ್ನ ಸ್ನೇಹಿತರೊಂದಿಗೆ ಬಿಹಾರಕ್ಕೆ ಸುಹಾಸ್ ತೆರಳುತ್ತಿದ್ದ ಎನ್ನಲಾಗಿದೆ.
ಹೊಸ ಬೈಕುಗಳನ್ನು ಹೊತ್ತು ಹೈದರಾಬಾದ್ ಕಡೆಗೆ ಸಾಗುತ್ತಿದ್ದ ಕಂಟೇನರ್ ಲಾರಿಗೆ ಹಿಂಬದಿಯಿಂದ ಮಂಗಳೂರು ಮೂಲದ ಸುಗಮ ಟ್ರಾವೆಲ್ಸ್ ಬಸ್ ಡಿಕ್ಕಿ ಹೊಡೆದಿದೆ. ಘಟನೆ ನಂತರ ಸ್ಥಳಕ್ಕೆ ಎಸ್‌ಪಿ ಕುಶಾಲ್ ಚೌಕ್ಸಿ ಸೇರಿದಂತೆ ಚಿಕ್ಕಬಳ್ಳಾಪುರ ಪೊಲೀಸರು ಭೇಟಿ ನೀಡಿ ಗಾಯಾಳುಗಳನ್ನು ಆಸ್ಪತ್ರೆಗೆ ರವಾನೆ ಮಾಡಿದರು. ಅಪಘಾತದಲ್ಲಿ ಬಸ್ ಗುದ್ದಿದ ರಭಸಕ್ಕೆ ಬಸ್‌ನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಬಸ್ಸು ಕಂಟೈನರ್‌ನ ಒಳಗೆ ಸಿಲುಕಿಕೊಂಡಿದ್ದು, ಓರ್ವ ಪ್ರಯಾಣಿಕನ ಕಾಲು ಸಹ ಸಿಲುಕಿ ನರಳಾಡಿದ್ದಾನೆ.