ಡೈಲಿ ವಾರ್ತೆ:JAN/20/2026

ಕಾಸರಗೋಡಿನಲ್ಲಿ ಭೀಕರ ರಸ್ತೆ ಅಪಘಾತ: ಮಂಗಳೂರಿನ ಇಬ್ಬರು ಯುವಕರು ಸಾವು, ಮೂವರು ಗಂಭೀರ ಗಾಯ

ಕಾಸರಗೋಡು, ಜನವರಿ 20: ಕಾಸರಗೋಡಿನ ರಾಷ್ಟ್ರೀಯ ಹೆದ್ದಾರಿಯ ಚಟ್ಟಂಚಾಲ್ ತೆಕ್ಕಿಲ್ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಕಾರು ಮತ್ತು ಲಾರಿ ನಡುವೆ ಢಿಕ್ಕಿ ಹೊಡೆದ ಪರಿಣಾಮ ಮಂಗಳೂರಿನ ಇಬ್ಬರು ಯುವಕರು ಮೃತಪಟ್ಟಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಮೃತರನ್ನು ದಕ್ಷಿಣ ಕನ್ನಡ ಜಿಲ್ಲೆಯ ಸಜಿಪ ಬೈಲಗುತ್ತು ನಿವಾಸಿ ದಿ. ಎಸ್.ಬಿ. ಮುಹಮ್ಮದ್ ಅವರ ಪುತ್ರ ಆಸಿಫ್ ಮುಹಮ್ಮದ್ (41) ಮತ್ತು ನಾಟೆಕಲ್ ನಿವಾಸಿ ಅಬ್ಬಾಸ್ ಹಾಜಿ ಅವರ ಪುತ್ರ ಮುಹಮ್ಮದ್ ಶಫೀಕ್ (23) ಎಂದು ಗುರುತಿಸಲಾಗಿದೆ.

ಐವರು ಗೆಳೆಯರು ವಯನಾಡಿಗೆ ಪ್ರವಾಸ ಹೋಗಿ, ಸೋಮವಾರ ರಾತ್ರಿ ಊರಿಗೆ ಹಿಂದಿರುಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಇವರು ಪ್ರಯಾಣಿಸುತ್ತಿದ್ದ ಬಿಎಂಡಬ್ಲ್ಯು ಕಾರು ಚಟ್ಟಂಚಾಲ್ ತೆಕ್ಕಿಲ್ ಬಳಿ ಬಂದಾಗ ಲಾರಿ ಢಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ.

ಅಪಘಾತದ ತೀವ್ರತೆಗೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಸ್ಥಳೀಯರು ಮತ್ತು ಪೊಲೀಸರು ರಕ್ಷಣಾ ಕಾರ್ಯಾಚರಣೆ ನಡೆಸಿದರು. ಗಾಯಾಳುಗಳನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆ ಸ್ಥಳೀಯರಲ್ಲಿ ಆಘಾತ ಸೃಷ್ಟಿಸಿದೆ.