ಡೈಲಿವಾರ್ತೆ:09/ಏಪ್ರಿಲ್ /2026

800 ವರ್ಷಗಳ ಇತಿಹಾಸವಿರುವ ಮೂಡುಬಗೆ ಶ್ರೀ ಮಾಲಿಂಗೇಶ್ವರ ದೇಗುಲ ಲೋಕಾರ್ಪಣೆ: ಏ. 12ಕ್ಕೆ ಬ್ರಹ್ಮಕುಂಭಾಭಿಷೇಕ

​ಕುಂದಾಪುರ: ತಾಲೂಕಿನ ಅಂಪಾರು ಗ್ರಾಮದ ಮೂಡುಬಗೆ ಬಾಳ್ಕಟ್ಟು ಎಂಬಲ್ಲಿ ಸುಮಾರು 800 ವರ್ಷಗಳ ಇತಿಹಾಸವಿರುವ, ಅತ್ಯಂತ ಕಾರಣಿಕ ಶಕ್ತಿಯ ಶ್ರೀ ಮಾಲಿಂಗೇಶ್ವರ ದೇವರ ಶಿಲಾಮಯ ದೇಗುಲದ ಲೋಕಾರ್ಪಣೆ, ಅಷ್ಟಬಂಧ ಪ್ರತಿಷ್ಠಾಪನೆ ಹಾಗೂ ಬ್ರಹ್ಮಕುಂಭಾಭಿಷೇಕ ಮಹೋತ್ಸವವು ಏಪ್ರಿಲ್ 8ರಿಂದ 12ರವರೆಗೆ ಅದ್ದೂರಿಯಾಗಿ ನಡೆಯಲಿದೆ ಎಂದು ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ತಿಳಿಸಿದೆ.

​ಗುರುವಾರ ದೇವಸ್ಥಾನದ ವಠಾರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಅರುಣ್ ಕುಮಾರ್ ಶೆಟ್ಟಿ ಅಂಪಾರು ಮಾತನಾಡಿ ಅಳಿವಿನ ಅಂಚಿನಲ್ಲಿದ್ದ ಈ ಪುಣ್ಯಕ್ಷೇತ್ರವನ್ನು ಕೇವಲ ಎಂಟು ತಿಂಗಳ ಅಲ್ಪಾವಧಿಯಲ್ಲಿ ಸುಮಾರು 6 ರಿಂದ 7 ಕೋಟಿ ರೂ. ವೆಚ್ಚದಲ್ಲಿ ಭವ್ಯ ಶಿಲಾಮಯ ದೇಗುಲವಾಗಿ ಪುನರ್ ನಿರ್ಮಿಸಲಾಗಿದೆ ಎಂದು ವಿವರಿಸಿದರು.

​ಐತಿಹಾಸಿಕ ಹಿನ್ನೆಲೆ: ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡುಬಂದಂತೆ ಇದು ರಾಜರ ಕಾಲದ ವೈಭವಯುತ ದೇವಸ್ಥಾನವಾಗಿದ್ದು, ಕಾಲಕ್ರಮೇಣ ಅಳಿವಿನಂಚಿಗೆ ತಲುಪಿತ್ತು. ‘ಸೇವಾಚೇತನ ಟ್ರಸ್ಟ್’ ಮತ್ತು ಊರ-ಪರವೂರ ಭಕ್ತಾದಿಗಳ ಸಹಕಾರದೊಂದಿಗೆ ಇಂದು ದೇವಸ್ಥಾನವು ಜೀರ್ಣೋದ್ಧಾರಗೊಂಡಿದೆ ಎಂದು ಹೇಳಿದರು.

​ಗಣ್ಯರ ಆಗಮನ: ಏಪ್ರಿಲ್ 12ರಂದು ನಡೆಯಲಿರುವ ಬ್ರಹ್ಮಕುಂಭಾಭಿಷೇಕದ ಧಾರ್ಮಿಕ ಕಾರ್ಯಕ್ರಮಗಳು
ಶೃಂಗೇರಿ ಶಾರದಾ ಪೀಠದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ತೀರ್ಥ ಸ್ವಾಮೀಜಿಗಳ ಅಮೃತ ಹಸ್ತದಿಂದ ನೆರವೇರಲಿದೆ. ಈ ಸಂದರ್ಭದಲ್ಲಿ ಪೇಜಾವರ ಶ್ರೀಗಳು ಸೇರಿದಂತೆ ಅನೇಕ ಸಂತ-ಮಹಾಂತರು ಪಾದಾರ್ಪಣೆ ಮಾಡಲಿದ್ದಾರೆ.
ಅಲ್ಲದೆ ಕಾರ್ಯಕ್ರಮದಲ್ಲಿ ರಾಜ್ಯದ ಉಪಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್, ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಹಾಗೂ ಇನ್ನಿತರ ಗಣ್ಯರು ಭಾಗವಹಿಸಲಿದ್ದಾರೆ ಎಂದು ಹೇಳಿದರು.

ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಕೋಶಾಧಿಕಾರಿ ಅಂಪಾರು ಕೆ. ಅಶೋಕ್ ನಾಯ್ಕ್ ಮಾತನಾಡಿ ಉತ್ಸವದ ಐದೂ ದಿನಗಳ ಕಾಲ ಭಕ್ತಾದಿಗಳಿಗೆ ಮಧ್ಯಾಹ್ನ ಮತ್ತು ರಾತ್ರಿ ಮಹಾ ಅನ್ನಸಂತರ್ಪಣೆ ಇರಲಿದ್ದು, ವಿಶೇಷವಾಗಿ ಏಪ್ರಿಲ್ 10 ಮತ್ತು 12ರಂದು ಬೃಹತ್ ಮಟ್ಟದ ಅನ್ನದಾಸೋಹ ನಡೆಯಲಿದೆ.

ದೇಗುಲದ ಗರ್ಭಗುಡಿಯ ಒಳಗಡೆಯೇ 50 ಅಡಿ ಆಳದ ತೀರ್ಥ ಬಾವಿಯನ್ನು ನಿರ್ಮಿಸಲಾಗಿದ್ದು, ಗಟ್ಟಿಯಾದ ಶಿಲಾಪದರದ ನಡುವೆಯೂ ದೈವಸಂಕಲ್ಪದಂತೆ ದೇವರ ಅಭಿಷೇಕಕ್ಕೆ ಸಮೃದ್ಧ ಜಲ ಲಭ್ಯವಾಗಿದೆ.

​ದೇವಸ್ಥಾನದ ಅಭಿವೃದ್ಧಿಗಾಗಿ ಚಂದ್ರ ಉಡುಪ ಮತ್ತು ಲಕ್ಷ್ಮೀನಾರಾಯಣ ಉಡುಪ ಕುಟುಂಬಸ್ಥರು 40 ಸೆಂಟ್ಸ್ ಜಾಗವನ್ನು ದಾನವಾಗಿ ನೀಡಿದ್ದು, ಭವ್ಯ ದೇಗುಲದ ನಿರ್ಮಾಣಕ್ಕೆ ಪೂರಕವಾಗಿದೆ. ಮುಂದಿನ ದಿನಗಳಲ್ಲಿ ಸುಮಾರು 15 ರಿಂದ 20 ಕೋಟಿ ವೆಚ್ಚದಲ್ಲಿ ರಥಬೀದಿ, ರಥ ನಿರ್ಮಾಣ ಹಾಗೂ ಪುಷ್ಕರಣಿ ಅಭಿವೃದ್ಧಿಯ ಕನಸನ್ನು ಸಮಿತಿ ಹೊಂದಿದೆ ಎಂದು ಅಶೋಕ್ ನಾಯ್ಕ್ ಹೇಳಿದರು.

​ಪತ್ರಿಕಾಗೋಷ್ಠಿಯಲ್ಲಿ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಅರುಣ್ ಕುಮಾರ್ ಶೆಟ್ಟಿ, ಗೌರವಾಧ್ಯಕ್ಷ ಸುಬ್ರಹ್ಮಣ್ಯ ಯಡಿಯಾಳ, ಕಾರ್ಯದರ್ಶಿ ಮನೋಹರ್ ಶೆಟ್ಟಿ ಕುಂಠಿಹಕ್ಲು, ಕೋಶಾಧಿಕಾರಿ ಕೆ ಅಶೋಕ್ ನಾಯ್ಕ್ ಅಂಪಾರು,
ಸೇವಾಚೇತನ ಟ್ರಸ್ಟ್‌ನ ಸ್ಥಾಪಕ ಅಧ್ಯಕ್ಷರಾದ ಸಂತೋಷ್ ಕುಮಾರ್ ಶೆಟ್ಟಿ, ರಂಜಿತ್ ಶೆಟ್ಟಿ ಹಾಗೂ ಸಮಿತಿಯ ಪ್ರಮುಖರು ಉಪಸ್ಥಿತರಿದ್ದರು.