



ಡೈಲಿವಾರ್ತೆ:11/ಏಪ್ರಿಲ್ /2026

ಮಧ್ಯ ಏಷ್ಯಾದ ನರಹತ್ಯೆ ವಿರುದ್ಧ ಉಡುಪಿಯಲ್ಲಿ ಮೊಳಗಿದ ಶಾಂತಿ ಮಂತ್ರ: ರಂಗಕರ್ಮಿ ರಾಮಾಂಜಿ ಏಕಾಂಗಿ ಸತ್ಯಾಗ್ರಹ

ಉಡುಪಿ: ಜಗತ್ತಿನ ಯಾವುದೋ ಮೂಲೆಯಲ್ಲಿ ನಡೆಯುತ್ತಿರುವ ಯುದ್ಧದ ಕಿಚ್ಚು ಸಾತ್ವಿಕ ಮನಸ್ಸುಗಳನ್ನು ಅದೆಷ್ಟು ಘಾಸಿಗೊಳಿಸುತ್ತದೆ ಎಂಬುದಕ್ಕೆ ಉಡುಪಿಯ ಈ ಪ್ರತಿಭಟನೆ ಸಾಕ್ಷಿಯಾಗಿದೆ.
ಮಧ್ಯ ಏಷ್ಯಾದಲ್ಲಿ ನಡೆಯುತ್ತಿರುವ ಭೀಕರ ಯುದ್ಧ ಮತ್ತು ಅಮಾಯಕ ಜನರ ನರಹತ್ಯೆಯನ್ನು ಖಂಡಿಸಿ, ಕುಂದಾಪುರದ ‘ನಮ್ಮ ಭೂಮಿ’ ಸಂಸ್ಥೆಯ ರಾಯಭಾರಿ ಹಾಗೂ ಮಕ್ಕಳ ಹಕ್ಕುಗಳ ಹೋರಾಟಗಾರ ರಾಮಾಂಜಿ ಅವರು ಶನಿವಾರ ಉಡುಪಿಯಲ್ಲಿ ಏಕಾಂಗಿ ಸತ್ಯಾಗ್ರಹ ನಡೆಸಿದರು.
ನಗರದ ಕ್ಲಾಕ್ ಟವರ್ ಸಮೀಪವಿರುವ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ರಾಮಾಂಜಿ, ಅಹಿಂಸಾ ಮಾರ್ಗದ ಮೂಲಕ ವಿಶ್ವಶಾಂತಿಗಾಗಿ ಆಗ್ರಹಿಸಿದರು. ಕೇವಲ ಒಬ್ಬ ವ್ಯಕ್ತಿಯಾಗಿ ಅಷ್ಟೇ ಅಲ್ಲದೆ, ಜಗತ್ತಿನ ಒಬ್ಬ ಸಂವೇದನಾಶೀಲ ಪ್ರಜೆಯಾಗಿ ಅವರು ಈ ಸಾಂಕೇತಿಕ ಹೋರಾಟಕ್ಕೆ ಇಳಿದಿದ್ದಾರೆ.
ಪ್ರತಿಭಟನೆಯ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯುದ್ಧದ ಹೆಸರಿನಲ್ಲಿ ನಡೆಯುತ್ತಿರುವ ಲೂಟಿ ಮತ್ತು ಹಿಂಸೆಯನ್ನು ತೀವ್ರವಾಗಿ ಖಂಡಿಸಿದರು. ಕಳೆದ ಒಂದು ತಿಂಗಳಿನಿಂದ ನಡೆಯುತ್ತಿರುವ ಯುದ್ಧದ ಘಟನೆಗಳು ಮನಸ್ಸಿಗೆ ತೀವ್ರ ನೋವುಂಟು ಮಾಡಿವೆ. ಇದು ಕೇವಲ ಎರಡು ದೇಶಗಳ ನಡುವಿನ ಸಂಘರ್ಷವಲ್ಲ, ಮಾನವ ಜನಾಂಗದ ಮೇಲೆ ನಡೆಯುತ್ತಿರುವ ಹಿಂಸೆ ಮತ್ತು ಪ್ರಕೃತಿಯ ಮೇಲಿನ ದಬ್ಬಾಳಿಕೆ. ಯಾರದೋ ಲಾಭಕ್ಕಾಗಿ, ಸಂಪತ್ತಿನ ಲೂಟಿಗಾಗಿ ನಡೆಯುತ್ತಿರುವ ಈ ಮಾರಣಹೋಮವನ್ನು ಸಹಿಸಲು ಸಾಧ್ಯವಿಲ್ಲ. ಅದಕ್ಕಾಗಿಯೇ ಗಾಂಧಿ ಮಾದರಿಯಲ್ಲಿ ಈ ನೈತಿಕ ಪ್ರತಿಭಟನೆ ಹಮ್ಮಿಕೊಂಡಿದ್ದೇನೆ ಎಂದು ಹೇಳಿದರು.
ರಾಜ್ಯವ್ಯಾಪಿ ವಿಸ್ತರಣೆಯ ಚಿಂತನೆ:
ಸದ್ಯ ಉಡುಪಿಯಲ್ಲಿ ಸಾಂಕೇತಿಕವಾಗಿ ಆರಂಭವಾಗಿರುವ ಈ ಶಾಂತಿ ಮಂತ್ರದ ಧ್ವನಿಯನ್ನು ಮುಂದಿನ ದಿನಗಳಲ್ಲಿ ರಾಜ್ಯವ್ಯಾಪಿ ವಿಸ್ತರಿಸುವ ಇಚ್ಛೆಯನ್ನು ಅವರು ವ್ಯಕ್ತಪಡಿಸಿದ್ದಾರೆ. ಯುದ್ಧದ ಬದಲು ಶಾಂತಿಯ ಅಗತ್ಯವನ್ನು ಸಾರಲು ತಾವು ಬದ್ಧರಾಗಿರುವುದಾಗಿ ಅವರು ತಿಳಿಸಿದ್ದಾರೆ.