



ಡೈಲಿವಾರ್ತೆ:12/ಏಪ್ರಿಲ್ /2026

ನೇರಳೆಕಟ್ಟೆ: ಸಹಕಾರಿ ಸಂಘದಲ್ಲಿ ದಲಿತ ಮಹಿಳೆಗೆ ಕಿರುಕುಳ ಹಾಗೂ ಜಾತಿ ನಿಂದನೆ ಆರೋಪ – ಮೂವರ ವಿರುದ್ಧ ಪ್ರಕರಣ ದಾಖಲು

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ನೆಟ್ಲಮುಡ್ನೂರು ಗ್ರಾಮದ ನೇರಳಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಕೆಲಸ ಮಾಡುತ್ತಿದ್ದ ದಲಿತ ಸಮುದಾಯದ ಮಹಿಳಾ ಉದ್ಯೋಗಿಯೊಬ್ಬರಿಗೆ ಜಾತಿ ನಿಂದನೆ ಹಾಗೂ ಮಾನಸಿಕ ಕಿರುಕುಳ ನೀಡಿದ ಆರೋಪದ ಹಿನ್ನೆಲೆಯಲ್ಲಿ ಮೂವರ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರುದಾರರಾದ ಶೇಷಮ್ಮ (47), ನೆಕ್ಕರೆ ಮಠ ನಿವಾಸಿಯಾಗಿದ್ದು, ಕಳೆದ 24 ವರ್ಷಗಳಿಂದ ಸಂಘದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇವರಲ್ಲಿ 17 ವರ್ಷಗಳಿಂದ ಖಾಯಂ ಗುಮಾಸ್ತೆಯಾಗಿ ಕಾರ್ಯನಿರ್ವಹಿಸುತ್ತಿದ್ದು, ಪ್ರಸ್ತುತ ಮಾಣಿ ಶಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ದೂರಿನ ಪ್ರಕಾರ, ಏಪ್ರಿಲ್ 1ರಂದು ನಡೆದ ಸಿಬ್ಬಂದಿ ಸಭೆಯಲ್ಲಿ ಸಂಘದ ಅಧ್ಯಕ್ಷ ಪುಷ್ಪರಾಜ್ ಚೌಟ ಅವರು ಹಾಜರಾತಿ ವಿಚಾರವಾಗಿ ಪ್ರಶ್ನಿಸಿ ಮೇಜು ಬಡಿದು ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಬಳಿಕ ಏಪ್ರಿಲ್ 2ರಂದು ಪ್ರಭಾರ ಶಾಖಾ ವ್ಯವಸ್ಥಾಪಕ ಯತೀಶ್ ಡಿ. ಗೌಡ ಅವರು “ಕೆಳಜಾತಿಯವಳು” ಎಂದು ನಿಂದಿಸಿ ಸಾರ್ವಜನಿಕವಾಗಿ ಅವಮಾನ ಮಾಡಿರುವುದಾಗಿ ಆರೋಪಿಸಲಾಗಿದೆ. ಅಲ್ಲದೆ, ಕೆಲಸಕ್ಕೆ ಅಡ್ಡಿಪಡಿಸಿ, ಕಂಪ್ಯೂಟರ್ ಬ್ಲಾಕ್ ಮಾಡಿ, ಕುರ್ಚಿಯಿಂದ ದೂಡಿದ ಘಟನೆ ಕೂಡ ನಡೆದಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಘಟನೆಯಿಂದ ಮಾನಸಿಕವಾಗಿ ನೊಂದ ಶೇಷಮ್ಮ ಅವರಿಗೆ ನೋಟಿಸ್ ನೀಡಿ ಕೆಲಸದಿಂದ ದೂರ ಇಡುವ ಕ್ರಮ ಕೈಗೊಂಡಿದ್ದಾರೆ ಎನ್ನಲಾಗಿದೆ. ಮೇಲಾಧಿಕಾರಿಗಳ ಸೂಚನೆಯ ಮೇರೆಗೆ ಏಪ್ರಿಲ್ 4ರಂದು ಕರ್ತವ್ಯಕ್ಕೆ ಹಾಜರಾಗುವಂತೆ ಹೇಳಲಾಗಿದ್ದರೂ, ಏಪ್ರಿಲ್ 7ರಂದು ಮತ್ತೆ ಕಿರುಕುಳ ನೀಡಲಾಗಿದ್ದು, ಇದರಿಂದ ಅವರು ಕಚೇರಿಯಲ್ಲೇ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ತಕ್ಷಣ ಪುತ್ತೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಏಪ್ರಿಲ್ 10ರವರೆಗೆ ಚಿಕಿತ್ಸೆ ನೀಡಲಾಗಿದೆ.
ಈ ಹಿನ್ನೆಲೆಯಲ್ಲಿ ಶೇಷಮ್ಮ ಅವರು ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಸಂಘದ ಅಧ್ಯಕ್ಷ ಪುಷ್ಪರಾಜ್ ಚೌಟ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯಶೋದಾ ಹಾಗೂ ಪ್ರಭಾರ ಶಾಖಾ ವ್ಯವಸ್ಥಾಪಕ ಯತೀಶ್ ಡಿ. ಗೌಡ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) 2023ರ ಕಲಂ 74, 49 ಹಾಗೂ ಪರಿಶಿಷ್ಟ ಜಾತಿ-ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಪ್ರಕರಣದ ತನಿಖೆಯನ್ನು ಬಂಟ್ವಾಳ ಉಪವಿಭಾಗದ ಡಿವೈಎಸ್‌ಪಿ ಕೈಗೆತ್ತಿಕೊಂಡಿದ್ದು, ಪೊಲೀಸರು ಸ್ಥಳ ಮಹಜರು ನಡೆಸಿ ಸಾಕ್ಷ್ಯ ಸಂಗ್ರಹಿಸುತ್ತಿದ್ದಾರೆ.